ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಸಂಪುಟದ (Gujarat Cabinet) ಇಬ್ಬರು ಸಚಿವರಿಂದ ತಲಾ ಒಂದೊಂದು ಖಾತೆಗಳನ್ನು ವಾಪಸ್ ಪಡೆದಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.
ಶನಿವಾರ ರಾತ್ರೋರಾತ್ರಿ ರಾಜೇಂದ್ರ ತ್ರಿವೇದಿ (Rajendra Trivedi) ಅವರಿಂದ ಕಂದಾಯ ಖಾತೆ ಹಾಗೂ ಪೂರ್ಣೇಶ್ ಮೋದಿ (Purnesh Modi) ಅವರಿಂದ ರಸ್ತೆ ಮತ್ತು ಕಟ್ಟಡ ಖಾತೆಯನ್ನು ಭೂಪೇಂದ್ರ ಪಟೇಲ್ ಅವರು ಹಿಂಪಡೆದಿದ್ದಾರೆ. ಅಲ್ಲದೆ, ಎರಡೂ ಖಾತೆಗಳ ನಿರ್ವಹಣೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದಾರೆ. ಆದಾಗ್ಯೂ, ತ್ರಿವೇದಿ ಬಳಿ ಕಾನೂನು ಮತ್ತು ನ್ಯಾಯ, ವಿಪತ್ತು ನಿರ್ವಹಣೆ, ಸಂಸದೀಯ ವ್ಯವಹಾಗಳ ಖಾತೆಗಳು ಉಳಿದಿವೆ. ಪೂರ್ಣೇಶ್ ಮೋದಿ ಬಳಿ ಸಾರಿಗೆ, ಪ್ರವಾಸೋದ್ಯಮ ಖಾತೆಗಳು ಇವೆ.
ಇಬ್ಬರೂ ಪ್ರಭಾವಿ ಸಚಿವರಾಗಿದ್ದು, ಹೀಗೆ ರಾತ್ರೋರಾತ್ರಿ ಸಂಪುಟ ದರ್ಜೆಯ ಸಚಿವರ ಖಾತೆಗಳನ್ನು ಹಿಂಪಡೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅದರಲ್ಲೂ, ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಮಧ್ಯೆಯೇ ಖಾತೆ ಹಿಂಪಡೆದಿರುವುದು ಬಿಜೆಪಿಯಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಲ್ಲದೆ, ಇಬ್ಬರು ಸಚಿವರು ಸಮರ್ಪಕವಾಗಿ ಖಾತೆ ನಿರ್ವಹಿಸದ ಕಾರಣದಿಂದಲೂ ವಾಪಸ್ ಪಡೆಯಲಾಗಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ | Gujarat Elections 2022 | ಗುಜರಾತ್ ಗೆಲ್ಲಲು ಸಿದ್ಧತೆ; 24 ಗಂಟೆ ಉಚಿತ ವಿದ್ಯುತ್ ಭರವಸೆ ನೀಡಿದ ಕೇಜ್ರಿವಾಲ್