ವಾರಣಾಸಿ: ಉತ್ತರ ಪ್ರದೇಶದ ಗಾಜಿಪುರ ಮೂಲದ ಸರ್ಕಾರಿ ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗಳ ಅನುಚಿತ ಚಿತ್ರಗಳನ್ನು ಕ್ಲಿಕ್ಕಿಸಿ (Hostel Students) ನಂತರ ಅದೇ ಕಾಲೇಜಿನ ಪುರುಷ ಸ್ನೇಹಿತನಿಗೆ ಕಳುಹಿಸಿದ ಪ್ರಸಂಗ ನಡೆಸಿದೆ. ದೂರು ದಾಖಲಾದ ಬಳಿಕ ವಿದ್ಯಾರ್ಥಿನಿ ಹಾಗೂ ಆತನ ಸ್ನೇಹಿತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಫೋಟೋಗಳನ್ನು ಪಡೆದುಕೊಂಡು ವಿದ್ಯಾರ್ಥಿನಿಯರನ್ನು ಬೆದರಿಸಲು ಪ್ರಯತ್ನಿಸಿದ ವಿದ್ಯಾರ್ಥಿಯನ್ನು ಮೊಹಮ್ಮದ್ ಅಮೀರ್ ಎಂದು ಗುರುತಿಸಲಾಗಿದೆ.
ಗಾಜಿಪುರದ ಖಾಸಗಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಫೋಟೊಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ವರ್ಷದ ಬಿಎಚ್ಎಂಎಸ್ (ಬ್ಯಾಚುಲರ್ ಆಫ್ ಹೋಮಿಯೋಪತಿ ಮೆಡಿಸಿನ್ ಅಂಡ್ ಸರ್ಜರಿ) ವಿದ್ಯಾರ್ಥಿನಿಯೊಬ್ಬಳು, ಉಳಿದ ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ಬಟ್ಟೆ ಬದಲಿಸುವ ವೇಳೆ ರಹಸ್ಯವಾಗಿ ಫೋಟೊ ಹಾಗೂ ವಿಡಿಯೊ ತೆಗೆದಿದ್ದಳು. ಅದನ್ನು ಆಕೆ ಸ್ನೇಹಿತ ಅಮೀರ್ಗೆ ಕಳುಹಿಸಿದ್ದಳು. ಆತ ಹೆಣ್ಣು ಮಕ್ಕಳನ್ನು ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದ. ಆಗಸ್ಟ್ 7 ರಂದು ವಿದ್ಯಾರ್ಥಿನಿಯರಲ್ಲಿ ಹಲವರು ಈ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಕಾಲೇಜು ಆಡಳಿತಕ್ಕೆ ಸಂಬಂಧಿಸಿದ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದ್ದಾರೆ.
ಅಮೀರ್ ಕೂಡ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಬಿಎಚ್ಎಂಎಸ್ ಓದುತ್ತಿದ್ದಾನೆ. ನಂತರ, ಕಾಲೇಜು ಆಡಳಿತವು ಘಟನೆಯ ಬಗ್ಗೆ ವಿಚಾರಣೆ ನಡೆಸಿ ಅವರ ಮೊಬೈಲ್ ಗಳನ್ನು ಸಹ ವಶಕ್ಕೆ ತೆಗೆದುಕೊಂಡು ಅವರಿಬ್ಬರನ್ನು ಸಸ್ಪೆಂಡ್ ಮಾಡಿದ್ದಾರೆ.
ಇದನ್ನೂ ಓದಿ :Udupi Toilet case : ಉಡುಪಿ ವಿಡಿಯೊ ಪ್ರಕರಣ ಸಿಐಡಿಗೆ ಹಸ್ತಾಂತರ; ನಡೆಯಲಿದೆ ಉನ್ನತ ಮಟ್ಟದ ತನಿಖೆ
ಪ್ರಭಾರ ಪ್ರಾಂಶುಪಾಲ ಬಿ.ಎಸ್.ಸಹಾನಿ ಈ ಕುರಿತ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ದೂರಿನಲ್ಲಿ, ಬಟ್ಟೆ ಬದಲಾಯಿಸುವ ವೇಳೆ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿದು ಅಮೀರ್ ಗೆ ಕಳುಹಿಸಲಾಗಿದೆ ಆರೋಪಿಸಿದ್ದಾರೆ. ಅಮೀರ್ ಬೇರೆ ಬೇರೆ ಮೊಬೈಲ್ ಸಂಖ್ಯೆಗಳ ಮೂಲಕ ತಮ್ಮೊಂದಿಗೆ ಅನಪೇಕ್ಷಿತ ಸಂಪರ್ಕವನ್ನು ಮಾಡುತ್ತಿದ್ದ. ನಂತರ ಬೆದರಿಕೆಗಳನ್ನು ಹಾಕುತ್ತಿದ್ದ ಎಂದು ದೂರಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಮೊದಲು ಒಪ್ಪಿರಲಿಲ್ಲ
ಕಾಲೇಜು ಆಡಳಿತ ಮಂಡಳಿ ಮೊದಲು ಅವರನ್ನು ಪ್ರಶ್ನಿಸಿದಾಗ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ತಾವು ಪರಿಚಿತರು ಎಂಬುದನ್ನು ಒಪ್ಪಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಸುಬೋಧ್ ತ್ರಿಪಾಠಿ ಮಾತನಾಡಿ, “ಇಬ್ಬರ ವಿರುದ್ಧ ದೂರು ಬಂದ ನಂತರ ಅವರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತ ದೂರು ಸ್ವೀಕರಿಸಲಾಗಿದೆ ಎಂದು ಗಾಜಿಪುರ ಎಸ್ಪಿ ಓಂವೀರ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಗರ ಎಸ್ಪಿಗೆ ಸೂಚನೆ ನೀಡಲಾಗಿದೆ. ಆರೋಪಿಗಳು ತಮ್ಮ ಮೊಬೈಲ್ಗಲನ್ನು ಫಾರ್ಮ್ಯಾಟ್ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.