Site icon Vistara News

Terrorists Killed: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಇಬ್ಬರು ಉಗ್ರರ ಎನ್‌ಕೌಂಟರ್

kashmir Indian Army

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯು (India Army) ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದೆ. ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು (Terrorists Killed) ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಇನ್ನೂ ಹಲವು ಉಗ್ರರು ಅಡಗಿರುವ ಕುರಿತು ಶಂಕೆ ಇರುವ ಕಾರಣ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

“ಉಗ್ರರು ಒಳನುಸುಳುವ ಕುರಿತು ನಿಖರ ಮಾಹಿತಿ ಮೇರೆಗೆ ಕುಪ್ವಾರ ಜಿಲ್ಲೆಯ ಮಚ್ಚಾಲ್‌ ಸೆಕ್ಟರ್‌ನ ಗಡಿಯಲ್ಲಿ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಅಡಗಿರುವ ಶಂಕೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ” ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಸಕ್ತ ವರ್ಷ 31 ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಜನವರಿ 1ರಿಂದ ಸೆಪ್ಟೆಂಬರ್‌ 26ರ ಅವಧಿಯಲ್ಲಿ 31 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಕೆಲ ದಿನಗಳ ಹಿಂದಷ್ಟೇ ಮಾಹಿತಿ ನೀಡಿದ್ದರು. ಹಾಗೆಯೇ, ಕಣಿವೆಯಲ್ಲಿ ಉಗ್ರರ ಬಂಧನದಲ್ಲೂ ಸೇನೆ ಮುಂದಿದೆ. ಕಳೆದ 9 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ 204 ಉಗ್ರರನ್ನು ಬಂಧಿಸಲಾಗಿದೆ. ಕಳೆದ ತಿಂಗಳಲ್ಲಿಯೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿದರೆ, 40 ಉಗ್ರರನ್ನು ಬಂಧಿಸಲಾಗಿದೆ. ಇವರಿಂದ ಎಕೆ 47 ಗನ್‌, ಮ್ಯಾಗಜಿನ್‌, ಪಿಸ್ತೂಲ್‌, ಗ್ರನೇಡ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Anantnag Encounter: ಲಷ್ಕರೆ ಉಗ್ರನ ಹತ್ಯೆಯೊಂದಿಗೆ ಅಂತ್ಯವಾದ 7 ದಿನಗಳ ಅನಂತನಾಗ್ ಎನ್‌ಕೌಂಟರ್!

111 ಉಗ್ರರೇ ಸೇನೆಯ ಗುರಿ

ಜಮ್ಮು-ಕಾಶ್ಮೀರದಲ್ಲಿ 31 ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Exit mobile version