Site icon Vistara News

Kashmir Encounter: ‌ಕಾಶ್ಮೀರಕ್ಕೆ ಮೋದಿ ಭೇಟಿಗೂ ಒಂದು ದಿನ ಮೊದಲೇ ಇಬ್ಬರು ಉಗ್ರರ ಹತ್ಯೆ

Kashmir Encounter

Two Terrorists Killed In Jammu Kashmir Encounter

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಹಿಂದು ಯಾತ್ರಿಕರು, ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿರುವುದಕ್ಕೆ ತಕ್ಕ ತಿರುಗೇಟು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಸೂಚಿಸಿದ ಬೆನ್ನಲ್ಲೇ ಕಣಿವೆಯಲ್ಲಿ ಭದ್ರತಾ ಸಿಬ್ಬಂದಿಯು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಸೋಪೊರ್‌ನಲ್ಲಿ (Kashmir Encounter) ನಡೆದ ಎನ್‌ಕೌಂಟರ್‌ ವೇಳೆ ಭದ್ರತಾ ಸಿಬ್ಬಂದಿಯು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

“ಹದಿಪೋರಾ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಮುನ್ನಡೆ ಸಾಧಿಸಿದ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ” ಎಂಬುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕಾಶ್ಮೀರಕ್ಕೆ ನಾಳೆ ಮೋದಿ ಭೇಟಿ

ಜೂನ್‌ 21ರ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಜೂನ್‌ 20ರಂದು ಕಾಶ್ಮೀರಕ್ಕೆ ಆಗಮಿಸಲಿದ್ದು, ಇದಕ್ಕಾಗಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಜೂನ್‌ 21ರಂದು ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆ (World Yoga Day) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಉಗ್ರರ ದಾಳಿಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ, ಸೇನಾ ಮುಖ್ಯಸ್ಥರು ಸೇರಿ ಹಲವರೊಂದಿಗೆ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಬೇಕು ಎಂಬುದಾಗಿ ಸೂಚಿಸಿದ್ದರು.

ಇದನ್ನೂ ಓದಿ: Encounter In Bandipora: ಬಂಡಿಪೋರಾದಲ್ಲಿ ಎನ್‌ಕೌಂಟರ್‌; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Exit mobile version