Site icon Vistara News

Goods Train Derails: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್‌ಪಿಜಿ ಸಾಗಿಸುತ್ತಿದ್ದ ರೈಲು; ಯಾರನ್ನು ‘ಹಳಿ’ಯಬೇಕು?

Goods Train Derails In Madhya Pradesh

Two wagons of goods train carrying LPG derail in Madhya Pradesh

ಭೋಪಾಲ್‌: ಒಡಿಶಾದ ಬಾಲಾಸೋರ್‌ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ 288 ಜನ ದಾರುಣವಾಗಿ ಮೃತಪಟ್ಟು, ಸಾವಿರಕ್ಕೂ ಅಧಿಕ ಜನ ಗಾಯಗೊಂಡ ಪ್ರಕರಣ ದೇಶವನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ರೈಲು (Goods Train Derails) ಹಳಿ ತಪ್ಪಿದೆ. ಅದರಲ್ಲೂ, ಎಲ್‌ಪಿಜಿ ಸಾಗಿಸುತ್ತಿದ್ದ ಗೂಡ್ಸ್‌ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್‌ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಜಬಲ್ಪುರ ಜಿಲ್ಲೆ ಶಾಹ್‌ಪುರ ಭಿತೋನಿಯಲ್ಲಿ ಅನ್‌ಲೋಡ್‌ ಮಾಡಲು ರೈಲನ್ನು ಸರಿಯಾದ ಜಾಗದಲ್ಲಿ ನಿಲ್ಲಿಸುವಾಗ ಹಳಿ ತಪ್ಪಿದೆ. ಭಾರತ್‌ ಪೆಟ್ರೋಲಿಯಂ ಡಿಪೊ ಬಳಿ ಅವಘಡ ಸಂಭವಿಸಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಹಳಿ ತಪ್ಪಿದ ರೈಲಿನ ಎರಡು ಬೋಗಿಗಳನ್ನು ಕೂಡಲೇ ಮತ್ತೆ ಹಳಿಗೆ ತರಲಾಗಿದೆ ಎಂದು ತಿಳಿದುಬಂದಿದೆ.

“ಶಾಹ್‌ಪುರ ಭಿತೋನಿ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಎಲ್‌ಪಿಜಿ ಸಾಗಿಸುತ್ತಿದ್ದ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಆದರೆ, ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ. ಮೇನ್‌ ಲೈನ್‌ನಲ್ಲಿ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಬುಧವಾರ ಬೆಳಗ್ಗೆ ಹಳಿ ದುರಸ್ತಿ ಕಾರ್ಯ ನಡೆದಿದೆ” ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಾರ್ಖಂಡ್‌ನಲ್ಲೂ ತಪ್ಪಿದ ರೈಲು ದುರಂತ

ಮಧ್ಯಪ್ರದೇಶದಲ್ಲಿ ರೈಲು ಹಳಿ ತಪ್ಪಿದರೆ, ಜಾರ್ಖಂಡ್‌ನಲ್ಲಿ ರೈಲು ದುರಂತವೊಂದು ತಪ್ಪಿದೆ. ಜಾರ್ಖಂಡ್‌ನ ಬೊಕಾರೋ ಪ್ರದೇಶದಲ್ಲಿ ರೈಲು ಹಳಿ ಹಾಗೂ ಗೇಟ್‌ ಮಧ್ಯೆ ಟ್ರ್ಯಾಕ್ಟರ್‌ ಸಿಲುಕಿಕೊಂಡಿದ್ದು, ಇದೇ ವೇಳೆ ದೆಹಲಿ-ಭುವನೇಶ್ವರ ಎಕ್ಸ್‌ಪ್ರೆಸ್‌ ರೈಲು ಚಲಿಸುತ್ತಿತ್ತು. ಟ್ರ್ಯಾಕ್ಟರ್‌ನಲ್ಲಿ ಎಂಟು ಬ್ಯಾರೆಲ್‌ ಡೀಸೆಲ್‌ ಇದ್ದ ಕಾರಣ ಭಾರಿ ಅನಾಹುತವೊಂದು ನಡೆಯುವುದಿತ್ತು. ಆದರೆ, ಲೋಕೊ ಪೈಲಟ್‌ ಚಾಣಾಕ್ಷತನ ಮೆರೆದು, ರೈಲು ನಿಲ್ಲಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಇದನ್ನೂ ಓದಿ: Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು

ಕೆಲ ದಿನಗಳ ಹಿಂದಷ್ಟೇ ಬಿಹಾರದಲ್ಲೂ ಗೂಡ್ಸ್‌ ರೈಲು ಹಳಿ ತಪ್ಪಿತ್ತು. ಒಡಿಶಾದ ಬಾರ್‌ಗಢ ಜಿಲ್ಲೆಯಲ್ಲಿ ಗೂಡ್ಸ್‌ ರೈಲೊಂದು ಹಳಿ ತಪ್ಪಿತ್ತು. ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಗೂಡ್ಸ್‌ ರೈಲಾದ ಕಾರಣ ಹಾಗೂ ಭೀಕರ ಅಪಘಾತವಲ್ಲದ ಕಾರಣ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದವು.

ಒಡಿಶಾ ರೈಲು ದುರಂತವು ದೇಶಾದ್ಯಂತ ಸುದ್ದಿಯಾಗಿತ್ತು. ನೂರಾರು ಜನ ಮೃತಪಟ್ಟ ಕಾರಣ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದ್ದವು. ಮೋದಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಆದಾಗ್ಯೂ, ರೈಲು ಅಪಘಾತ ಸಂಭವಿಸಿದ 51 ಗಂಟೆಗಳಲ್ಲೇ ಹಳಿ ದುರಸ್ತಿ ಕಾರ್ಯ ಮುಗಿದು, ಈಗ ಎಂದಿನಂತೆ ರೈಲು ಸಂಚರಿಸುತ್ತಿವೆ. ಆದರೆ, ಹೀಗೆ ಸಾಲು ಸಾಲು ರೈಲುಗಳು ಹಳಿ ತಪ್ಪುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.

Exit mobile version