ನವದೆಹಲಿ: ರೈಲ್ವೆ ಟ್ರ್ಯಾಕ್‌ನಲ್ಲಿ ರೀಲ್ಸ್ (Insta Reels) ಮಾಡಲು ಹೋಗಿ ಇಬ್ಬರು ಯುವಕರು, ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ. ಮೃತರನ್ನು ವನ್ಶ್ ಶರ್ಮಾ(23) ಮತ್ತು ಮೋನು ಅಲಿಯಾಸ್ ವರುಣ್(20) ಎಂದು ಗುರುತಿಸಲಾಗಿದೆ.
ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ, ರೈಲು ಅಪಘಾತ ಕುರಿತ ಮಾಹಿತಿ ನೀಡುವ ಫೋನ್ ಕರೆ ಬಂತು. ಕ್ರಾಂತಿನಗರ ಫ್ಲೈಓವರ್ ಬಳಿ ಬಂದು ನೋಡಿದಾಗ ಇಬ್ಬರ ಮೃತ ದೇಹಗಳು ಟ್ರ್ಯಾಕ್ ಪಕ್ಕದಲ್ಲಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶರ್ಮಾ ಬಿ ಟೆಕ್ ಮೂರನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರು. ಮೋನು ಹತ್ತಿರದ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಸೇರಿ ರೀಲ್ಸ್, ಶಾರ್ಟ್ ಫಿಲ್ಮ್‌ಗಳನ್ನು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದರು. ಅವರಿಬ್ಬರ ಮೊಬೈಲ್‌ಗಳನ್ನು ಸ್ಥಳದಲ್ಲೇ ಸಿಕ್ಕಿವೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಹರೀಶ್ ಎಚ್ ತಿಳಿಸಿದ್ದಾರೆ.
ಇದನ್ನ ಓದಿ: Reel to Real: ʻರೀಲ್ಸ್’ನಲ್ಲಿ ಪರಿಚಯವಾದವನ ಜೊತೆ ಪರಾರಿ ಆದ ಪತ್ನಿ! ಪತಿ ದೂರು
ಸೋಷಿಯಲ್ ಮೀಡಿಯಾದಲ್ಲಿ ವನ್ಶ್ ಎರಡು ಪ್ರೊಫೈಲ್‌ಗಳನ್ನು ಹೊಂದಿದ್ದಾರೆ. ಒಂದು ಪ್ರೊಫೈಲ್‌ನಲ್ಲಿ ವಿಡಿಯೋ ಕ್ರಿಯೇಟರ್ ಎಂದು ಹೇಳಿಕೊಂಡಿದ್ದರೆ, ಮತ್ತೊಂದರಲ್ಲಿ ರಾಜಕಾರಣಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮೋನು ಕೂಡ ಎರಡು ಇನ್‌ಸ್ಟಾ ಪ್ರೊಫೈಲ್ ಹೊಂದಿದ್ದಾನೆ. ಈತನೂ ಒಂದರಲ್ಲಿ ವಿಡಿಯೋ ಕ್ರಿಯೇಟರ್ ಮತ್ತೊಂದರಲ್ಲಿ ಫೋಟೋಗ್ರಫರ್ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.