ಮುಂಬೈ: “ಚಲಿಸುತ್ತಿರುವಾಗಲೇ ವಾಹನದ ಟಯರ್ ಸ್ಫೋಟವಾಗುವುದು ಭಗವಂತನ ಆಟವಲ್ಲ” (Act Of God) ಎಂದು ಸ್ಪಷ್ಟಪಡಿಸಿದ ಬಾಂಬೆ ಹೈಕೋರ್ಟ್, ಕಾರಿನ ಟಯರ್ ಸ್ಫೋಟದ ಬಳಿಕ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.25 ಕೋಟಿ ರೂ. ಪರಿಹಾರಿ ನೀಡಬೇಕು ಎಂದು ಇನ್ಶುರೆನ್ಸ್ ಕಂಪನಿಗೆ ಮೋಟಾರ್ ಅಪಘಾತ ಪರಿಹಾರ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ.
ಮಕರಂದ್ ಪಟವರ್ಧನ್ ಎಂಬುವರು 2010ರ ಅಕ್ಟೋಬರ್ 25ರಂದು ಪುಣೆಯಿಂದ ಮುಂಬೈಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಇದೇ ವೇಳೆ ಕಾರು ವೇಗದಲ್ಲಿದ್ದ ಕಾರಣ ಟಯರ್ ಸ್ಫೋಟಗೊಂಡಿದ್ದು, ಇದೇ ಅಪಘಾತದಲ್ಲಿ 34 ವರ್ಷದ ಪಟವರ್ಧನ್ ಮೃತಪಟ್ಟಿದ್ದರು. ಇವರಿಗೆ ಶೇ.9ರಷ್ಟು ಬಡ್ಡಿದರದೊಂದಿಗೆ 1.25 ಕೋಟಿ ರೂ. ಪರಿಹಾರ ನೀಡಬೇಕು ಎಂದು ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿ ಲಿಮಿಟೆಡ್ ಎಂಬ ವಿಮಾನ ಕಂಪನಿಗೆ ಮೋಟಾರ್ ಅಪಘಾತ ಪರಿಹಾರ ನ್ಯಾಯಾಧಿಕರಣ ಆದೇಶಿಸಿತ್ತು.
ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ವಿಮಾ ಕಂಪನಿಯು ಹೈಕೋರ್ಟ್ ಮೊರೆ ಹೋಗಿತ್ತು. ಈಗ ಬಾಂಬೆ ಹೈಕೋರ್ಟ್, “ಟಯರ್ ಸ್ಫೋಟವು ಮಾನವನ ನಿರ್ಲಕ್ಷ್ಯವಾಗಿದೆ. ಮಾನವನ ನಿಯಂತ್ರಣದಲ್ಲಿರದ, ಪ್ರಕೃತಿ ವಿಕೋಪಗಳು ಮಾತ್ರ ದೇವರ ಆಟವಾಗುತ್ತದೆ. ಹಾಗಾಗಿ, ಪರಿಹಾರ ಕೊಡುವುದರಿಂದ ವಿಮಾ ಕಂಪನಿಯು ತಪ್ಪಿಸಿಕೊಳ್ಳುವ ಹಾಗಿಲ್ಲ” ಎಂಬ ಮಹತ್ವದ ತೀರ್ಪು ನೀಡಿದೆ.
ಪಟವರ್ಧನ್ ಅವರು ಆಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅವರಿಗೆ 69 ಸಾವಿರ ರೂ. ಸಂಬಳ ಇತ್ತು. ಮನೆಯಲ್ಲಿ ಪಟವರ್ಧನ್ ಅವರ ತಂದೆ-ತಾಯಿ, ಪತ್ನಿ ಹಾಗೂ ಮಗಳಿಗೆ ಪಟವರ್ಧನ್ ಅವರ ಆದಾಯವೇ ಆಧಾರವಾದ ಕಾರಣ ಪರಿಹಾರ ನೀಡಬೇಕು ಎಂದು ಪಟವರ್ಧನ್ ಕುಟುಂಬಸ್ಥರ ಪರ ವಕೀಲರ ವಾದವಾಗಿತ್ತು.
ಇದನ್ನೂ ಓದಿ: Women’s Reservation : ನೂರಕ್ಕೆ ನೂರರಷ್ಟು ಮಹಿಳಾ ಮೀಸಲಾತಿ ಅಸಂವಿಧಾನಿಕ ಎಂದ ಕೋರ್ಟ್