Site icon Vistara News

ಅಧಿಕೃತ ನಿವಾಸ ವರ್ಷಾ ತೊರೆದ ಠಾಕ್ರೆ, ರಾಜೀನಾಮೆ ಇಂಗಿತ, ಶಿಂಧೆಗೆ ನಾಯಕತ್ವ

ಮುಂಬಯಿ: ಶಿವಸೇನಾ ಶಾಸಕರೇ ನನ್ನ ಮೇಲೆ ನಂಬಿಕೆ ಇಟ್ಟಿಲ್ಲ ಎಂದಾದರೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವಲ್ಲ, ಪಕ್ಷದ ಹುದ್ದೆಗೂ ರಾಜೀನಾಮೆ ನೀಡಲು ಸಿದ್ಧ ಎಂದು ಫೇಸ್‌ ಬುಕ್‌ ಲೈವ್‌ನಲ್ಲೇ ಘೋಷಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಇದೀಗ ಅಧಿಕೃತ ನಿವಾಸವಾದ ವರ್ಷಾ ವನ್ನು ಕೂಡಾ ತೆರವು ಮಾಡಿದ್ದಾರೆ.

ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲೇ ಸಂಪುಟ ಸಭೆ ನಡೆಸಿದ್ದಲ್ಲದೆ, ಸಂಜೆ ಫೇಸ್‌ ಬುಕ್‌ ಲೈವ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು ಉದ್ಧವ್‌ ಠಾಕ್ರೆ. ಇದಾಗಿ ಸ್ವಲ್ಪವೇ ಹೊತ್ತಿನಲ್ಲಿ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಅವರೀಗ ತಮ್ಮ ಮಾತೋಶ್ರೀ ಮನೆಗೆ ಹೋಗಿದ್ದಾರೆ. ಇದು ನಾಯಕತ್ವವನ್ನು ತ್ಯಜಿಸುವ ಸ್ಪಷ್ಟ ನಿರ್ಧಾರವನ್ನು ತೋರಿಸುತ್ತದೆ. ಹಾಗಂತ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿಲ್ಲ.

ಶಿಂಧೆ ಪ್ರತಿಕ್ರಿಯೆ ಏನು?
ಒಂದು ಹಂತದಲ್ಲಿ ಬಂಡಾಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಉದ್ಧವ್‌ ಠಾಕ್ರೆ ಅವರು ಶಾಸಕಾಂಗ ಪಕ್ಷ ಸಭೆಯನ್ನು ಕರೆದು ವಿಪ್‌ ಜಾರಿಗೊಳಿಸಲು ಸೂಚಿಸಿದ್ದರು. ಇದರಲ್ಲಿ ಭಾಗವಹಿಸದೆ ಇದ್ದವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ, ಅತ್ತ ಏಕನಾಥ ಶಿಂಧೆ ಅವರು ತಾನೇ ಶಾಸಕಾಂಗ ಪಕ್ಷ ನಾಯಕ ಎಂದು ಘೋಷಿಸಿಕೊಂಡ ಬೆನ್ನಿಗೇ ಉದ್ಧವ್‌ ಠಾಕ್ರೆ ತಮ್ಮ ವರಸೆ ಬದಲಿಸಿದರು. ಅದರ ಜತೆಗೆ ಶಿವಸೇನೆಯ ಸಂಸದರು ಕೂಡಾ ರೆಬೆಲ್‌ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಾಕೀತು ಮಾಡಿದ್ದರು. ಸಾಧ್ಯವಿದ್ದರೆ ಮನವೊಲಿಸುವಂತೆ ಸೂಚಿಸಿದ್ದರು.

ಈ ನಡುವೆ, ಉದ್ಧವ್‌ ಠಾಕ್ರೆ ಅವರ ಹೊಸ ಆಫರ್‌ಗೆ ಏಕನಾಥ ಶಿಂಧೆ ಬಣ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಹುಟ್ಟಿಕೊಂಡಿದೆ. ಠಾಕ್ರೆ ಅವರ ಪ್ರಕಾರ ಏಕನಾಥ ಶಿಂಧೆ ಅವರೇ ಪಕ್ಷದ ನಾಯಕರಾಗಬಹುದು, ಬೇಕಾದರೆ ಮುಖ್ಯಮಂತ್ರಿಯೂ ಆಗಬಹುದು. ಆದರೆ, ಈ ಆಫರ್‌ ಕೇವಲ ಕಾಂಗ್ರೆಸ್‌, ಎನ್‌ಸಿಪಿ ಜತೆಗಿನ ಮಹಾ ವಿಕಾಸ ಅಘಾಡಿಗೆ ಸೀಮಿತವಾ ಆಫರೇ ಅಥವಾ ಒಂದೊಮ್ಮೆ ಶಿಂಧೆ ಬಣ ಬಿಜೆಪಿಯನ್ನು ಬೆಂಬಲಿಸಿದರೆ ಅದಕ್ಕೂ ಠಾಕ್ರೆ ಕೂಟ ಸಮ್ಮತಿ ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಹಾಗಂತ, ಕಳೆದ ಎರಡು ದಿನಗಳಿಂದ ಬಾಳ್‌ ಠಾಕ್ರೆ ಅವರ ಹಿಂದುತ್ವದ ಬಗ್ಗೆ ಸಾಕಷ್ಟು ಮಾತನಾಡಿರುವ ಏಕನಾಥ ಶಿಂಧೆ ಬಣ ಬಿಜೆಪಿಯನ್ನೇ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ನಿಜವಾದರೆ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆ ಆಗುವುದು ಖಚಿತವಾಗುತ್ತದೆ.

| ಇದನ್ನೂ ಓದಿ | ಕುರ್ಚಿಗಾಗಿ ಹೋರಾಡಲ್ಲ, ಯಾವುದೇ ಕ್ಷಣ ರಾಜೀನಾಮೆಗೆ ಸಿದ್ಧ: ಉದ್ಧವ್‌ ಠಾಕ್ರೆ ಘೋಷಣೆ

Exit mobile version