ಮುಂಬೈ: ಚುನಾವಣೆ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿ, ಅವರ ಬಣಕ್ಕೇ ಬಿಲ್ಲು ಮತ್ತು ಬಾಣದ ಗುರುತು ನೀಡಿದ ಬಳಿಕ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಠಾಕ್ರೆ ಅವರಿಗೆ ಅಮಿತ್ ಶಾ (Amit Shah) ತಿರುಗೇಟು ನೀಡಿದ್ದಾರೆ. “ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಗಾದಿಗಾಗಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಕಾಲಿಗೆ ಬಿದ್ದಿದ್ದರು” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ವಿಜಯ ಸಂಕಲ್ಪ ರ‍್ಯಾಲಿಯಲ್ಲಿ ಮಾತನಾಡಿದ ಅವರು, “೨೦೧೯ರ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಅವರು ನಮ್ಮ ಜತೆಗೂಡಿ ಪ್ರಚಾರ ಕೈಗೊಂಡರು. ಆದರೆ, ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಿದ್ಧಾಂತ ಮರೆತು ಶರದ್ ಪವಾರ್ ಬಳಿ ತೆರಳಿದರು. ನನ್ನನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಅವರ ಕಾಲು ಹಿಡಿದರು” ಎಂದು ವ್ಯಂಗ್ಯ ಮಾಡಿದರು.
ಕೊಲ್ಹಾಪುರದಲ್ಲಿ ಅಮಿತ್ ಶಾ
“ಮಹಾರಾಷ್ಟ್ರದಲ್ಲಿ ನಿಜವಾದ ಶಿವಸೇನೆ ಈಗ ನಮ್ಮ ಜತೆಗೂಡಿ ಸರ್ಕಾರ ರಚಿಸಿದೆ. ಚುನಾವಣೆ ಆಯೋಗವು ನಿಜವಾದ ಶಿವಸೇನೆಗೆ ಬಿಲ್ಲು ಮತ್ತು ಬಾಣದ ಗುರುತು ನೀಡಿದ್ದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ನಮಗೆ ಅಧಿಕಾರದ ಮೇಲೆ ಮೋಹವಿಲ್ಲ. ಮಹಾರಾಷ್ಟ್ರ ಜನರ ಹಿತವಷ್ಟೇ ನಮ್ಮ ಪರಮೋಚ್ಚ ಗುರಿಯಾಗಿದೆ” ಎಂದು ಹೇಳಿದರು.
ಮೊಗ್ಯಾಂಬೊ ಖುಷ್ ಹುವಾ ಎಂದ ಉದ್ಧವ್
ಅಮಿತ್ ಶಾ ಅವರು ಮಹಾರಾಷ್ಟ್ರದ ಪುಣೆಯಲ್ಲಿ ರ‍್ಯಾಲಿ ಮಾಡಿ, ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಪ್ರತ್ಯುತ್ತರ ನೀಡಿದ್ದಾರೆ. ಹಾಗೆಯೇ, “ಶಿವಸೇನೆ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಗುರುತು ಏಕನಾಥ್ ಶಿಂಧೆ ಅವರಿಗೆ ಸಿಕ್ಕಿರುವುದಕ್ಕೆ ಮೊಗ್ಯಾಂಬೊ ಖುಷ್ ಹುವಾ (ಮೊಗ್ಯಾಂಬೊಗೆ ಖುಷಿಯಾಗಿದೆ)” ಎಂದು ಹಿಂದಿ ಸಿನಿಮಾದ ಡೈಲಾಗ್ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ. “ತುಂಬ ಜನ ಮೊಗ್ಯಾಂಬೊಗಳಿದ್ದಾರೆ. ಅವರಿಗೆ ಬೇರೆಯವರು ಜಗಳವಾಡಿದರೆ ಖುಷಿಯಾಗುತ್ತದೆ. ಇಬ್ಬರ ಮಧ್ಯೆ ತಂದಿಟ್ಟು, ಅವರು ಅಧಿಕಾರ ಅನುಭವಿಸುತ್ತಾರೆ” ಎಂದು ಕುಟುಕಿದ್ದಾರೆ.
ಇದನ್ನೂ ಓದಿ: Uddhav Thackeray: ‘ಗಂಡಸರೇ ಆಗಿದ್ದರೆ ಕದ್ದ ಚಿಹ್ನೆಯೊಂದಿಗೆ ನಮ್ಮೆದುರು ಬನ್ನಿ’, ಶಿಂಧೆ ಬಣಕ್ಕೆ ಉದ್ಧವ್ ಸವಾಲು