ಮುಂಬೈ, ಮಹಾರಾಷ್ಟ್ರ: ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವು, ಅಂದಿನ ಪ್ರತಿಪಕ್ಷ ನಾಯಕರಾಗಿದ್ದ ಹಾಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಬಂಧಿಸಲು ಮುಂದಾಗಿತ್ತು ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ದೇವೇಂದ್ರ ಫಡ್ನವಿಸ್ ಜತೆಗೇ ಗಿರೀಶ್ ಮಹಾಜನ್ ಅವರನ್ನು ಬಂಧಿಸಲು ಪ್ಲ್ಯಾನ್ ರೂಪಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂಧೆ ಅವರು, ಅಂದಿನ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಗಿರೀಶ್ ಮಹಾಜನ್ ಅವರನ್ನು ಬಂಧಿಸಲು ಎಂವಿಎ ಸರ್ಕಾರದಿಂದ ನಡೆಯುತ್ತಿದ್ದ ಪ್ಲ್ಯಾನ್‌ಗೆ ನಾನು ಸಾಕ್ಷಿಯಾಗಿದ್ದೇನೆ. ಆ ಸರ್ಕಾರವು ಮಹಾಜನ್ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 1999 ಜಾರಿಗೊಳಿಸಲು ಯೋಜಿಸಿತ್ತು. ನಾನು ಹೇಳಿದ್ದನ್ನೇ ಮತ್ತೆ ಹೇಳಲು ಸಾಧ್ಯವಿಲ್ಲ. ಆದರೆ, ಅದನ್ನು ಸಂಪೂರ್ಣ ತಡೆಯುವ ಸಮಯ ಎದುರಾಗಿದೆ ಎಂದು ಶಿಂಧೆ ಹೇಳಿದರು.
ದೇವೇಂದ್ರ ಫಡ್ನವಿಸ್, ಮಹಾಜನ್ ಬಂಧನಗಳ ಮೂಲಕ ಭಾರತೀಯ ಜನತಾ ಪಾರ್ಟಿ ಹಿನ್ನಡೆಗೆ ಹೋಗುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ, ನಾನು ಅವರ ನಿರ್ಧಾರವನ್ನು ಬದಲಿಸುವ ಬದಲಿಗೆ ಇಡೀ ಸರ್ಕಾರವನ್ನು ಬೀಳಿಸಿದೆ ಮತ್ತು ಮನೆಯಲ್ಲಿ ಕೂಡಿಸುವ ಹಾಗೆ ಮಾಡಿದೆ ಎಂದು ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ: Shiv Sena : ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಶಿವಸೇನಾ ನೂತನ ಮುಖ್ಯಸ್ಥ
ಈ ಸಂಚಿನಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳದಂತೆ ನಾನು ಸೂಚಿಸಿದ್ದೇನೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೇ ಸಾಕು. ಈ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂಬುದು ನನಗೆ ಸಂಪೂರ್ಣ ಮಾಹಿತಿ ಇದೆ. ಒಂದು ವೇಳೆ, ಅಗತ್ಯ ಬಿದ್ದರೆ ಈ ಕುರಿತು ತನಿಖೆ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಶಿಂಧೆ ತಿಳಿಸಿದರು.