Site icon Vistara News

Shiv Sena: ಶಿಂಧೆ ಬಣ ರಿಯಲ್ ಶಿವ ಸೇನೆ; ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಿದ ಠಾಕ್ರೆ

Uddhav Thackeray question Speaker order of real shiv sena in Supreme Court

ನವದೆಹಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ (CM Eknath Shinde) ನೇತೃತ್ವದ ಬಣವೇ ನಿಜವಾದ ಶಿವಸೇನೆ(Real Shiv Sena) ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ (Speaker Rahul Narvekar) ಅವರು ನೀಡಿರುವ ಆದೇಶವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಬಣವು ಸುಪ್ರೀಂ ಕೋರ್ಟ್‌ಗೆ (Supreme Court) ಮೊರೆ ಹೋಗಿದೆ. ಶಿಂಧೆ ಬಣದ 16 ಶಾಸಕರನ್ನು ಅಮಾನತುಗೊಳಿಸುವಂತೆ ಉದ್ದವ್ ಠಾಕ್ರೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಸ್ಪೀಕರ್ ಅವರು ವಜಾ ಮಾಡಿದ್ದರು.

ಜನವರಿ 10ರಂದು ನಾರ್ವೇಕರ್ ಅವರು ತಮ್ಮ ಆದೇಶ ನೀಡಿ, ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನೆ 2022ರಲ್ಲಿ ಇಬ್ಭಾಗವಾಗಿತ್ತು. ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಹೇಳಿದ್ದರು. ಅಲ್ಲದೇ, ಶಿವಸೇನೆ ಪಕ್ಷದ ಸಂವಿಧಾನದ ಪ್ರಕಾರ, ಹಾಲಿ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕಿತ್ತು ಹಾಕುವ ಅಧಿಕಾರವು ಉದ್ಧವ್ ಠಾಕ್ರೆ ಅವರಿಗೆ ಇಲ್ಲ ಎಂದು ಅವರು ತಿಳಿಸಿದ್ದರು.

ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಅಶಿಸ್ತನ್ನು ಹತ್ತಿಕ್ಕಲು ಯಾವುದೇ ಪಕ್ಷದ ನಾಯಕತ್ವವು ಸಂವಿಧಾನದ 10ನೇ ಶೆಡ್ಯೂಲ್‌ನ (ಪಕ್ಷಾಂತರ ವಿರೋಧಿ ಕಾನೂನು) ನಿಬಂಧನೆಗಳನ್ನು ಬಳಸುವಂತಿಲ್ಲ ಎಂದು ಸ್ಪೀಕರ್ ಘೋಷಿಸಿದ್ದರು. 2022ರ ಜೂನ್ ತಿಂಗಳಲ್ಲಿ ಶಿವಸೇನೆ ವಿಭಜನೆಗೊಂಡಾಗ, ಏಕನಾಥ ಶಿಂಧೆ ಅವರು, 54 ಶಾಸಕರ ಪೈಕಿ 37 ಶಾಸಕರನ್ನು ಬೆಂಬಲವನ್ನು ಹೊಂದಿದ್ದರು ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಶಿವಸೇನೆ ಹೆಸರನ್ನು ಪಕ್ಷದ ಚಿಹ್ನೆಯನ್ನೂ ಕೇಂದ್ರ ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣಕ್ಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ನೀಡಿರುವ ಆದೇಶ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಉದ್ಧವ್ ಠಾಕ್ರೆ ಅವರು, ಇದು ಕೋರ್ಟ್‌ಗೆ ಮಾಡಿದ ಅವಮಾನ ಎಂದು ಹೇಳಿದ್ದರು. ಸ್ಪೀಕರ್ ಆದೇಶವು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಕಟುವಾಗಿ ಟೀಕಿಸಿದ್ದರು.

ಅಸೆಂಬ್ಲಿ ಸ್ಪೀಕರ್ ಜನಾದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಏನು ಮಾಡಬೇಕು ಎಂದು ಹೇಳಲಾಗಿತ್ತೋ ಅದನ್ನೇ ಮಾಡಿದ್ದಾರೆ. ಇದು ಅನರ್ಹತೆಯ ಸರಳ ಪ್ರಕರಣವಾಗಿತ್ತು. ಸುಪ್ರೀಂ ಕೋರ್ಟ್ ಒಂದು ಚೌಕಟ್ಟನ್ನು ಹಾಕಿತು. ಆದರೆ ಸ್ಪೀಕರ್ ಅವರು ಸುಪ್ರೀಂ ಕೋರ್ಟ್‌ಗಿಂತ ಮೇಲಿದ್ದಾರೆಂದು ಭಾವಿಸಿದರು ಮತ್ತು ತಮ್ಮದೇ ಆದ ನ್ಯಾಯಾಲಯ ಮತ್ತು ತೀರ್ಪಿನೊಂದಿಗೆ ಬಂದರು ಎಂದು ಉದ್ದವ್ ಠಾಕ್ರೆ ಅವರು ಹೇಳಿದ್ದಾರೆ. ಈಗ ಇಡೀ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಯಾವ ತೀರ್ಪು ಬರುತ್ತೆ ಎಂದು ಕಾದು ನೋಡಬೇಕು.

ಈ ಸುದ್ದಿಯನ್ನೂ ಓದಿ: Disqualification Verdict: ಶಿಂಧೆ ಬಣವೇ ರಿಯಲ್ ಶಿವಸೇನೆ ಎಂದು ಸ್ಪೀಕರ್ ತೀರ್ಪು ಕೊಟ್ಟಿದ್ದೇಕೆ?

Exit mobile version