Site icon Vistara News

Maha politics | ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ

uddhav thackeray resigns

ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ, ಪಕ್ಷ ನಾಯಕ ಆದಿತ್ಯ ಠಾಕ್ರೆ ಸಹ ಜತೆಯಲ್ಲಿದ್ದರು.

ತಮ್ಮ ನಿವಾಸದಲ್ಲಿ ಸೇರಿದ್ದ ಶಾಸಕರು, ಸಂಸದರೊಂದಿಗೆ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ. ಹೋಗುವಾಗ ಉದ್ಧವ್‌ ಠಾಕ್ರೆಯವರೇ ಕಾರು ಚಲಾಯಿಸಿದರು. ಪಕ್ಕದ ಸೀಟ್‌ನಲ್ಲಿ ಆದಿತ್ಯ ಠಾಕ್ರೆ ಕುಳಿತಿದ್ದರು.

ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ಪ್ರಕಟಿಸಿದಂತೆಯೇ ಅವರು ರಾಜೀನಾಮೆ ನೀಡಿದ್ದು, ಶಿವಸೇನೆಯ ಸಚಿವ ಅನಿಲ್‌ ಪರಬ್‌ ಮೊದಲೇ ರಾಜಭವನಕ್ಕೆ ತೆರಳಿ, ರಾಜ್ಯಪಾಲರ ಭೇಟಿಯನ್ನು ಗೊತ್ತುಪಡಿಸಿದ್ದರು.

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂಬ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ನೀಡಿದ್ದ ಸೂಚನೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದ್ದರಿಂದ ಅವರಿಗೆ ರಾಜೀನಾಮೆ ನೀಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಒಂದು ವೇಳೆ ಬಹುಮತ ಸಾಬೀತು ಪಡಿಸಲು ಮುಂದಾಗಿದ್ದರೆ ಸೋಲು ಕೂಡ ಖಚಿತವಾಗಿತ್ತು.

ಶಾಸಕರ ಭೇಟಿಯಾದ ಫಡ್ನವಿಸ್‌

ಈ ನಡುವೆ ಬಿಜೆಪಿ ಶಾಸಕರು ಬುಧವಾರ ಸಂಜೆಯಿಂದ ಇಲ್ಲಿಯ ತಾಜ್‌ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ನೆಲೆಸಿದ್ದು, ಬುಧವಾರ ರಾತ್ರಿ ಈ ಹೋಟೆಲ್‌ಗೆ ಆಗಮಿಸಿದ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್‌ ಶಾಸಕರೊಂದಿಗೆ ಚರ್ಚೆ ನಡೆಸಿದರು.

ಪಕ್ಷ ಮುಂದೆ ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಚರ್ಚೆ ನಡೆದಿದ್ದು, ಹೈಕಮಾಂಡ್‌ ನೀಡಿದ ಸೂಚನೆಗಳನ್ನು ಫಡ್ನವಿಸ್‌ ಶಾಸಕರ ಗಮನಕ್ಕೆ ತಂದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ಅವರು. ಗುರುವಾರ ಬೆಳಗ್ಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

ಈ ನಡುವೆ ಗೋವಾಕ್ಕೆ ತೆರಳಿರುವ ಶಿವಸೇನೆಯ ಬಂಡಾಯ ಶಾಸಕರು ಅಲ್ಲಿಯೇ ಉಳಿದುಕೊಂಡಿದ್ದು, ಗುರುವಾರ ಬೆಳಗ್ಗೆ ಮುಂಬಯಿಗೆ ಹಿಂತಿರುಗುವ ಸಾಧ್ಯತೆಗಳಿವೆ. ಇವರ ವಿರುದ್ಧ ಪ್ರತಿಭಟನೆ ನಡೆಸದಂತೆ ಉದ್ಧವ್‌ ಠಾಕ್ರೆ ಶಿವಸೇನೆಯ ಕಾರ್ಯಕರ್ತರಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ| Maha politics | ಮಹಾವಿಕಾಸ ಅಘಾಡಿ ಸರಕಾರ ಪತನ; ಬಿಜೆಪಿ ಪಾಳಯದಲ್ಲಿ ಹರ್ಷ

Exit mobile version