Site icon Vistara News

ಬಾಳಾ ಸಾಹೇಬ್‌ ಹೆಸರು ಬಳಸುವಂತಿಲ್ಲ, ಶಿಂಧೆ ಬಣಕ್ಕೆ ಉದ್ಧವ್‌ ಠಾಕ್ರೆ ತಾಕೀತು

Uddhav Thackeray

ಮುಂಬಯಿ: ಗುವಾಹಟಿಯಲ್ಲಿರುವ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಮ್ಮ ಗುಂಪಿಗೆ ʻಶಿವಸೇನಾ ಬಾಳಾಸಾಹೇಬ್‌ ಬಣʼ ಎಂದು ಹೆಸರಿಟ್ಟುಕೊಂಡಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೆರಳಿ ಕೆಂಡವಾಗಿದ್ದಾರೆ.

ಶನಿವಾರ ಗುವಾಹಟಿಯಲ್ಲಿ ಮಾತನಾಡಿದ ಏಕನಾಥ್‌ ಶಿಂಧೆ ಬಣದ ಶಾಸಕ ದೀಪಕ್‌ ಕೇಸರ್‌ಕರ್‌ ಅವರು ತಮ್ಮ ತಂಡಕ್ಕೆ ʻಶಿವಸೇನಾ ಬಾಳಾ ಸಾಹೇಬ್‌ʼ ಎಂದು ಹೆಸರು ಇಟ್ಟಿದ್ದೇವೆ. ಇದು ಸ್ವತಂತ್ರ ಗುಂಪಾಗಿದ್ದು ಯಾವುದೇ ಪಕ್ಷದ ಜತೆ ವಿಲೀನವಾಗುವುದಿಲ್ಲ ಎಂದು ಹೇಳಿದ್ದರು.

ಇದಕ್ಕೆ ತುರ್ತಾಗಿ ಪ್ರತಿಕ್ರಿಯಿಸಿರುವ ಉದ್ಧವ್‌ ಠಾಕ್ರೆ, ಯಾವ ಕಾರಣಕ್ಕೂ ಬಂಡುಕೋರ ಶಾಸಕರು ಸೇನಾ ಭವನವನ್ನು ಬಳಸುವಂತಿಲ್ಲ ಮತ್ತು ಬಾಳಾ ಸಾಹೇಬ್‌ ಅವರ ಹೆಸರನ್ನು ಬಳಸಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ʻʻಅವರಿಗೆ ಈಗಾಗಲೇ ಸ್ಪಷ್ಟವಾಗಿ ಹೇಳಲಾಗಿದೆ. ಅವರು ಏನು ಬೇಕಾದರೂ ಮಾಡಬಹುದು. ನಾವು ಅವರ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಆದರೆ, ಯಾವ ಕಾರಣಕ್ಕೂ ಬಾಳಾಸಾಹೇಬ್‌ ಅವರ ಹೆಸರನ್ನು ಬಳಸಬಾರದು ಎಂದು ಹೇಳಲಾಗಿದೆʼʼ ಎಂದಿದ್ದಾರೆ.

ಶಿಂಧೆ ಗುಂಪು ಶಿವಸೇನಾ ಬಾಳಾ ಸಾಹೇಬ್‌ ಎಂಬ ಹೆಸರಿನಲ್ಲಿ ಬಣವಾಗಿ ಗುರುತಿಸಿಕೊಂಡು ಹೊಸ ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು.

ಈ ನಡುವೆ, ಶಿಂಧೆ ಅವರು ತಾವು ಇಂಥ ಯಾವುದೇ ಪ್ರಸ್ತಾಪ ಹೊಂದಿಲ್ಲ, ಹೊಸ ಗುಂಪಿಗೆ ಹೆಸರಿಟ್ಟಿಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ಹೇಳಿಕೊಂಡಿದೆ. ಒಟ್ಟಾರೆ ಮಹಾರಾಷ್ಟ್ರದ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ| ಶಿವಸೇನಾ ಬಾಳಾ ಸಾಹೇಬ್‌ ಎಂದು ಹೆಸರು ಇಟ್ಟುಕೊಂಡ ಶಿಂಧೆ ಬಣ, ಯಾವುದೇ ಪಕ್ಷದ ಜತೆ ವಿಲೀನ ಆಗಲ್ಲ

Exit mobile version