Site icon Vistara News

Maha politics: ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ರಂಗಪ್ರವೇಶ, ರೆಬೆಲ್‌ ಶಾಸಕರ ಪತ್ನಿಯರಿಗೆ ಫೋನ್‌ ಕರೆ!

Rashmi Thackeray

ಮುಂಬಯಿ: ಬಂಡಾಯದಿಂದ ನಲುಗಿರುವ ಶಿವಸೇನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿರುವ ಉದ್ಧವ್‌ ಠಾಕ್ರೆ ಬಣ ಹಲವು ತಂತ್ರಗಳ ಪ್ರಯೋಗ ಮಾಡುತ್ತಿದೆ. ಈ ನಡುವೆ ಪತಿಯನ್ನು ಈ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ರಶ್ಮಿ ಠಾಕ್ರೆ ಅವರೂ ರಂಗ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗಿದೆ. ರೆಬೆಲ್‌ ಶಾಸಕರು ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಬೀಡುಬಿಟ್ಟು ಯಾರ ಸಂಪರ್ಕಕ್ಕೂ ಸಿಗದೆ ಇರುವುದರಿಂದ ಅವರ ಪತ್ನಿಯರ ಮೂಲಕ ಸಂಧಾನ ನಡೆಸುವ ಪ್ರಯತ್ನ ನಡೆಯುತ್ತಿದೆ. ಇದರ ಸಾರಥ್ಯವನ್ನು ಉದ್ಧವ್‌ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಹೊತ್ತಿದ್ದಾರೆ.

ಶನಿವಾರ ರಾತ್ರಿ ಉದ್ಧವ್‌ ಅವರ ಪತ್ನಿ ರಶ್ಮಿ ಅವರು ಹಲವು ಬಂಡಾಯ ನಾಯಕರ ಪತ್ನಿಯರಿಗೆ ಕರೆ ಮಾಡಿ ತಮ್ಮ ಗಂಡಂದಿರಿಗೆ ಪರಿಸ್ಥಿತಿಯನ್ನು ವಿವರಿಸಿ ಮನವೊಲಿಸುವಂತೆ ಮನವಿ ಮಾಡಿದ್ದಾಗಿ ಹೇಳಲಾಗಿದೆ. ಕೆಲವರ ಜತೆ ಫೋನ್‌ ಸಂಭಾಷಣೆ ನಡೆಸಿದ್ದರೆ ಇನ್ನು ಕೆಲವರಿಗೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಉದ್ಧವ್‌ ಠಾಕ್ರೆ ಅವರು ಕೂಡಾ ಬಂಡಾಯ ಶಾಸಕರಿಗೆ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ, ಒಟ್ಟಾರೆ ಫಲಿತಾಂಶ ಏನು ಎನ್ನುವುದು ಸ್ಪಷ್ಟವಾಗಿಲ್ಲ.

ರಶ್ಮಿ ಠಾಕ್ರೆ ಅವರು ಪತ್ರಕರ್ತೆ
ಉದ್ಧವ್‌ ಠಾಕ್ರೆ ಅವರ ಪತ್ನಿ ರಶ್ಮಿ ಅವರು ರಾಜಕಾರಣದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿಲ್ಲವಾದರೂ ಮನೆಯಲ್ಲೇ ಇರುವ ವಾತಾವರಣದಿಂದ ಸಾಕಷ್ಟು ಕಲಿತಿದ್ದಾರೆ. ಪ್ರಸಕ್ತ ಶಿವಸೇನೆಯ ಮುಖವಾಣಿ ಸಾಮ್ನಾ ಮತ್ತು ಮಾರ್ಮಿಕ್‌ ಎಂಬ ಎರಡು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಉದ್ಧವ್‌ ಠಾಕ್ರೆ ಈ ಕೆಲಸ ಮಾಡುತ್ತಿದ್ದರು. ಅವರು ಮುಖ್ಯಮಂತ್ರಿಯಾದ ಬಳಿಕ ಹೊಣೆ ಇವರ ಹೆಗಲೇರಿತು.

ಉದ್ಧವ್‌ ಠಾಕ್ರೆ ಮತ್ತು ರಶ್ಮಿ ಠಾಕ್ರೆ ಖುಷಿ ಕ್ಷಣ

ರಶ್ಮಿ ಅವರು ಮುಂಬಯಿಯ ದೊಂಬಿವಿಲಿಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ತಂದೆ ಮಾಧವ ಪಠಾಣ್ಕರ್‌ ಉದ್ಯಮ ನಡೆಸುತ್ತಿದ್ದಾರೆ. ೫೫ ವರ್ಷದ ರಶ್ಮಿ ಅವರು ಮುಳುಂದ್‌ನ ವಿ.ಜಿ. ವಾಝೆ ಕಾಲೇಜಿನಲ್ಲಿ ಕಾಮರ್ಸ್‌ ಪದವಿ ಪಡೆದಿದ್ದು, ಬಳಿಕ ೧೯೮೭ರಲ್ಲಿ ಜೀವವಿಮಾ ನಿಗಮಕ್ಕೆ ಉದ್ಯೋಗಿಯಾಗಿ ಸೇರಿದರು. ಅವರು ಮೂಲತಃ ರಾಜ್‌ ಠಾಕ್ರೆ ಅವರ ಸೋದರಿ ಜಯಂತಿ ಅವರ ಗೆಳತಿ. ಆ ಮೂಲಕ ಬಾಳ್‌ ಠಾಕ್ರೆ ಕುಟುಂಬಕ್ಕೆ ಪರಿಚಯವಾಯಿತು. ಎಲ್ಲರೂ ಖುಷಿಯಿಂದ ಒಪ್ಪಿ ೧೯೮೯ರಲ್ಲಿ ಬಾಳ್‌ ಠಾಕ್ರೆ ಅವರ ಮನೆಯ ಸೊಸೆಯಾದರು.

ಉದ್ಧವ್‌ ಮತ್ತು ರಶ್ಮಿ ದಂಪತಿಗೆ ಇಬ್ಬರು ಮಕ್ಕಳು. ಒಬ್ಬರು ಸಂಪುಟ ಸಚಿವರಾಗಿರುವ ಆದಿತ್ಯ ಠಾಕ್ರೆ, ಇನ್ನೊಬ್ಬರು ತೇಜಸ್‌. ಉದ್ಧವ್‌ ಠಾಕ್ರೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದಾಗಲೆಲ್ಲ ಜತನದಿಂದ ಕಾಪಾಡಿದ ಈ ಹೆಣ್ಮಗಳು ಈಗ ರಾಜಕೀಯ ಸಂಕಷ್ಟ ಕಾಲದಲ್ಲೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

ನಿಜವೆಂದರೆ ರಶ್ಮಿ ಅವರದು ಎಲ್ಲರ ಜತೆ ಬೆರೆಯುವ ಸ್ವಭಾವ. ಶಿವಸೇನಾ ನಾಯಕರ ಪತ್ನಿಯರಲ್ಲಿ ಕೆಲವರ ಜತೆ ಒಡನಾಟವೂ ಇದೆ. ಆದರೆ, ಈ ಸಂಕೀರ್ಣ ಸಂದರ್ಭದಲ್ಲಿ ರೆಬೆಲ್‌ ನಾಯಕರು ತಮ್ಮ ಪತ್ನಿಯರ ಮಾತು ಕೇಳುವ ಸ್ಥಿತಿಯಲ್ಲೂ ಇರುವುದಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಅದರ ನಡುವೆಯೇ ರೆಬೆಲ್‌ ಬಣದೊಂದಿಗೆ ಹೋಗಿದ್ದ ನಿತಿನ್‌ ದೇಶ್‌ ಮುಖ್‌ ಅವರು ಮರಳಿ ಠಾಕ್ರೆ ಬಣಕ್ಕೆ ಬರಲು ಕಾರಣವಾಗಿದ್ದು ನಿತಿನ್‌ ಪತ್ನಿ ಸಲ್ಲಿಸಿದ ಒಂದು ದೂರು ಎನ್ನುವುದು ಕೂಡಾ ಗಮನಿಸಬೇಕಾದ ಅಂಶ. ತನ್ನ ಗಂಡನನ್ನು ಅಪಹರಿಸಲಾಗಿದೆ ಎಂದು ಅವರು ದೂರು ನೀಡಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಬಂದ ನಿತಿನ್‌ ದೇಶ್‌ ಮುಖ್‌ ಕೂಡಾ ತಾವು ಪಟ್ಟ ಪಾಡು, ಹೃದಯಾಘಾತವಾಗಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಂಡು ಬಂದ ಕಥೆಯನ್ನು ವಿವರಿಸಿದ್ದರು.

ಇದನ್ನೂ ಓದಿ| ಶಿಂಧೆ ಬಣದಿಂದ ಶಾಸಕ ವಾಪಸ್‌; ನನಗೆ ಬಲವಂತವಾಗಿ ಇಂಜೆಕ್ಷನ್‌ ಕೊಟ್ಟಿದ್ದಾರೆಂದ ನಿತಿನ್‌ಕೃ ದೇಶ್‌ಮುಖ್‌

Exit mobile version