Site icon Vistara News

ಉದ್ಧವ್‌ ಠಾಕ್ರೆ ರಾಜೀನಾಮೆ ಇಲ್ಲ, ಸಂಜೆ ಸೇನಾ ಶಾಸಕಾಂಗ ಪಕ್ಷ ಸಭೆ, ಹಾಜರಾಗದಿದ್ದರೆ ವಜಾ

shiv sena

ಮುಂಬಯಿ: ಮಹಾರಾಷ್ಟ್ರ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಎರಡೂ ಗುಂಪುಗಳು ಹೊಸ ಹೊಸ ತಂತ್ರಗಳ ಮೂಲಕ ಒಬ್ಬರನ್ನೊಬ್ಬರು ಮಣಿಸುವ ಪ್ರಯತ್ನದಲ್ಲಿ ತೊಡಗಿವೆ. ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಶಿವಸೇನೆಯ ಬಂಡುಕೋರ ಶಾಸಕರು ಗುವಾಹಟಿಯ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ತಂಗಿದ್ದರೆ, ಇತ್ತ ಶಿವಸೇನೆಯ ಪರಮೋಚ್ಚ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಬುಧವಾರ ಸಂಜೆ ಐದು ಗಂಟೆಗೆ ಶಾಸಕಾಂಗ ಪಕ್ಷ ಸಭೆ ಕರೆದಿದ್ದಾರೆ. ಇದರಲ್ಲಿ ಭಾಗವಹಿಸಲೇಬೇಕು ಎಂದು ವಿಪ್‌ ಜಾರಿಗೊಳಿಸಲಾಗಿದ್ದು, ವಿಪ್‌ ಉಲ್ಲಂಘಿಸಿದರೆ ಪಕ್ಷದಿಂದಲೇ ವಜಾ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಪಟ್ಟುಗಳು ಆಗಾಗ ಬದಲಾಗುತ್ತಿರುವಂತೆ ಕಂಡುಬರುತ್ತಿದೆ. ಬೆಳಗ್ಗೆ ಒಂದು ಹಂತದಲ್ಲಿ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿಗಳು ಹರಿದಾಡಿದ್ದವು. ಆದರೆ, ಮಧ್ಯಾಹ್ನ ನಡೆದ ಸಂಪುಟ ಸಭೆಯಲ್ಲಿ ಆ ತೀರ್ಮಾನಕ್ಕೆ ಬಾರದೆ ಬೇರೊಂದು ತಂತ್ರವನ್ನು ಹೆಣೆಯಲಾಗಿದೆ. ಸಂಜೆ ಐದು ಗಂಟೆಗೆ ಶಾಸಕಾಂಗ ಪಕ್ಷ ಸಭೆಯನ್ನು ಕರೆಯಲಾಗಿದ್ದು, ಅದರಲ್ಲಿ ಭಾಗವಹಿಸುವಂತೆ ಎಲ್ಲ ಶಿವಸೇನೆ ಶಾಸಕರಿಗೆ ವಿಪ್‌ ಜಾರಿಗೊಳಿಸಲಾಗಿದೆ.

ಸುಮಾರು ೪೬ ಶಾಸಕರು ತಮ್ಮ ಜತೆಗಿದ್ದಾರೆ ಎಂದು ಏಕನಾಥ ಶಿಂಧೆ ಹೇಳಿಕೊಂಡಿದ್ದಾರೆ. ಅವರ್ಯಾರೂ ಶಾಸಕಾಂಗ ಪಕ್ಷ ಸಭೆಗೆ ಬರುವ ಸಾಧ್ಯತೆಗಳು ಇಲ್ಲವೇ ಇಲ್ಲ. ಹೀಗಾಗಿ ಸಭೆಯ ಬಳಿಕ ಶಾಸಕಾಂಗ ಪಕ್ಷ ನಾಯಕರಾಗಿರುವ ಉದ್ಧವ್‌ ಠಾಕ್ರೆ ಅವರು ಮುಖ್ಯ ಸಚೇತಕರಿಗೆ ಯಾವ ಸೂಚನೆ ನೀಡುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.

ತಪ್ಪಿಸಿಕೊಂಡು ಬಂದ ಶಾಸಕ
ಈ ನಡುವೆ ಏಕನಾಥ ಶಿಂಧೆ ಅವರ ಬಣದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಯಲಾಗಿದೆ. ಸೂರತ್‌ಗೆ ಹೋಗಿದ್ದ ಶಾಸಕರ ತಂಡದಲ್ಲಿ ನಿತಿನ್‌ ದೇಶ್‌ ಮುಖ್‌ ಅವರು ಇದೀಗ ತಮ್ಮ ಕ್ಷೇತ್ರವಾದ ನಾಗಪುರಕ್ಕೆ ಮರಳಿದ್ದಾರೆ.

ತಮ್ಮನ್ನು ಬಲವಂತವಾಗಿ ಸೂರತ್‌ಗೆ ಕರೆದೊಯ್ಯಲಾಗಿತ್ತು ಎಂದು ಹೇಳಿರುವ ನಿತಿನ್‌ ದೇಶ್‌ಮುಖ್‌, ತಾನು ಹೃದಯಾಘಾತವಾಗಿದೆ ಎಂದು ಹೇಳಿ ನಂಬಿಸಿ ತಪ್ಪಿಸಿಕೊಂಡೆ ಎಂದಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವಾಗಲೂ ೧೦೦ರಿಂದ ೧೫೦ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದಿದ್ದಾರೆ. ತನ್ನ ನಿಷ್ಠೆ ಯಾವತ್ತಿದ್ದರೂ ಉದ್ಧವ್‌ ಠಾಕ್ರೆಗೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ| ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !

Exit mobile version