ಚೆನ್ನೈ: ಉದಯನಿಧಿ ಸ್ಟಾಲಿನ್ (Udhayanidhi Stalin) ಶಿರಚ್ಛೇದ ಮಾಡಿ ತಲೆ ತಂದು ಕೊಡುವವರಿಗೆ 10 ಕೋಟಿ ಬಹುಮಾನ ನೀಡುತ್ತೇನೆ ಎಂದು ಅಯೋಧ್ಯೆಯ ಸ್ವಾಮೀಜಿ ಹಾಕಿದ್ದಾರೆ. ಈ ಬೆದರಿಕೆಗೆ ಪ್ರತಿಕ್ರಿಯಿಸಿರುವ ಉದಯನಿಧಿ, ಇದಕ್ಕೆಲ್ಲ ಜಗ್ಗುವ ಆಸಾಮಿ ನಾನಲ್ಲ ಎಂದಿದ್ದಾರೆ.
ಚೆನ್ನೈನಲ್ಲಿ ನಡೆದ ಲೇಖಕರ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ (Sanatan Dharma row) ಮಲೇರಿಯಾ ಮತ್ತು ಡೆಂಗೆ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದ ವಿವಾದಾತ್ಮಕ ಸ್ವಾಮೀಜಿ, ಅಯೋಧ್ಯೆಯ ತಪಸ್ವಿ ಚಾವ್ನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ, ಸ್ಟಾಲಿನ್‌ಗೆ 10 ಕೋಟಿ ತಲೆದಂಡ ಘೋ಼ಷಿಸಿದ್ದಾರೆ. ಸ್ಟಾಲಿನ್ ಶಿರಚ್ಛೇದ ಮಾಡಿ ತಲೆ ತಂದು ಕೊಡುವವರಿಗೆ 10 ಕೋಟಿ ಬಹುಮಾನ ನೀಡುತ್ತೇನೆ. ಯಾರೂ ಸ್ಟಾಲಿನ್‌ನನ್ನು ಕೊಲ್ಲುವ ಧೈರ್ಯ ಮಾಡದಿದ್ದರೆ ನಾನೇ ಆತನನ್ನು ಪತ್ತೆ ಮಾಡಿ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಬೆದರಿಕೆಗೆ ಪ್ರತಿಕ್ರಿಯಿಸಿದ ತಮಿಳುನಾಡಿನ ಕ್ರೀಡಾ ಸಚಿವ ಮತ್ತು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ತಮಿಳುನಾಡಿಗಾಗಿ ತನ್ನ ಪ್ರಾಣವನ್ನು ಪಣ ಇಟ್ಟಿರುವ ವ್ಯಕ್ತಿಯ ಮೊಮ್ಮಗ ನಾನು ಮತ್ತು ಈ ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಪರಮಹಂಸ ಆಚಾರ್ಯ ಅವರು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ನನ್ನ ತಲೆ ಬೋಳಿಸಲು 10 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬರುತ್ತದೆ? ನನ್ನ ತಲೆ ಬಾಚಲು 10 ರೂಪಾಯಿ ಬಾಚಣಿಗೆ ಸಾಕು ಎಂದು ಹೇಳಿದ್ದಾರೆ.
ಬೆದರಿಕೆಗಳು ನಮಗೇನು ಹೊಸತಲ್ಲ, ನಾವು ಇದಕ್ಕೆಲ್ಲ ಬೆದರುವವರಲ್ಲ, ನಾನು ತಮಿಳುನಾಡಿಗಾಗಿ ತನ್ನ ತಲೆಯನ್ನು ರೈಲ್ವೇ ಟ್ರಾಕ್‌ಗೆ ಇಟ್ಟ ಕಲಾವಿದನ ಮೊಮ್ಮಗ. ಕರುಣಾನಿಧಿ ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿದ್ದು, ಪೆರಿಯಾರ್ ಅವರು ಆರಂಭಿಸಿದ ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿಯನ್ನು ಮುನ್ನಡೆಸಿದ್ದರು. 1953ರಲ್ಲಿ ತಮಿಳುನಾಡಿನ ಗ್ರಾಮವೊಂದಕ್ಕೆ ದಾಲ್ಮಿಯಾಸ್ ಕುಟುಂಬದ ಹೆಸರನ್ನು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ರೈಲ್ವೇ ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿದ್ದರು ಎಂದಿದ್ದಾರೆ ಉದಯನಿಧಿ.
ಸನಾತನ ಕಲ್ಪನೆಯು ಜಾತಿ ಮತ್ತು ಲಿಂಗದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ. ನಾನು ಮಾತನಾಡುವ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ ಎಂದಿದ್ದಾರೆ ಉದಯನಿಧಿ. ಇವರ ಸನಾತನ ಧರ್ಮ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ ಕುರಿತು ‘ಅದೇ ಮಾತು’ ಮತ್ತೆ ಮತ್ತೆ ಹೇಳುವೆ! ಉದಯನಿಧಿ ಸ್ಟಾಲಿನ್ ಭಂಡತನ