Site icon Vistara News

Udhayanidhi Stalin : ಸ್ಟಾಲಿನ್‌ ಪುತ್ರನ ಹೇಳಿಕೆ ವಿರುದ್ಧ ಕಿಚ್ಚು; I.N.D.I.A, ಖರ್ಗೆ ನಿಲುವೇನು ಎಂದು ಪ್ರಶ್ನಿಸಿದ ಬಿಜೆಪಿ

udhayanidhi stalin Ravikumar

ಬೆಂಗಳೂರು: ಸನಾತನ ಧರ್ಮವನ್ನು (sanatan Dharma) ನಾಶ ಮಾಡಬೇಕು ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಹೇಳಿಕೆಯ ಬಗ್ಗೆ I.N.D.I.A ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ (Karnataka BJP) ಆಗ್ರಹಿಸಿದೆ. ಜತೆಗೆ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವ ಉದಯನಿಧಿ ಸ್ಟಾಲಿನ್‌ ಅವರನ್ನು ತಕ್ಷಣವೇ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ (N Ravikumar) ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಬಗ್ಗೆ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದಾರೆ. ʻʻದಯಾನಿಧಿ ಸ್ಟಾಲಿನ್ ಹೇಳಿಕೆ ಖಂಡನೀಯ. ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕುʼʼ ಎಂದು ಆಗ್ರಹಿಸಿದರು.

ಖರ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದ ರವಿ ಕುಮಾರ್‌

ಉದಯನಿಧಿ ಸ್ಟಾಲಿನ್‌ ಅವರು I.N.D.I.A ಮಿತ್ರಕೂಟದಲ್ಲಿರುವ ಡಿಎಂಕೆ ಪಕ್ಷದ ನಾಯಕ. ಹೀಗಾಗಿ ಇಂಡಿಯಾ ಮಿತ್ರಕೂಟದ ನಾಯಕರು ಈ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟ ಪಡಿಸಬೇಕು. ಒಂದು ವೇಳೆ ಅವರು ಏನನ್ನೂ ಮಾತನಾಡದೆ ಹೋದರೆ ಉದಯನಿಧಿ ಸ್ಟಾಲಿನ್‌ ಅವರ ನಿಲುವೇ ಇಂಡಿಯಾದ ನಿಲುವು ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.

ಉದಯನಿಧಿ ಸ್ಟಾಲಿನ್‌ ಅವರು ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು ರವಿ ಕುಮಾರ್‌.

ʻʻನಾವು ಇದನ್ನು ರಾಜಕೀಯ ವಿಚಾರವಾಗಿ ಹೇಳುತ್ತಿಲ್ಲ. ಇದು ಭಾರತದ ಸಾಧುಸಂತರಿಗೆ ಮಾಡಿದ ಅಪಮಾನ. ಸನಾತನ ಧರ್ಮದ ರಕ್ಷಣೆ ಮಾಡಿದವರಿಗೆ ಅಪಮಾನ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇವೆʼʼ ಎಂದು ರವಿ ಕುಮಾರ್‌ ನುಡಿದರು.

ಇದು ಸಂವಿಧಾನ ವಿರೋಧಿ ಹೇಳಿಕೆ ಎಂದ ಬೊಮ್ಮಾಯಿ

ʻʻಸನಾತನ ಧರ್ಮ ಸರ್ವೇಜನಾಃ ಸುಖಿನೋಭವಂತು ಎಂದು ಹೇಳುವ ಧರ್ಮ. ಅದನ್ನು ಉದಯನಿಧಿ ಸ್ಟಾಲಿನ್‌ ಅವರು ಜಾತಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ. ಇದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ. ಇದು ಹಿಟ್ಲರ್‌ ನಡೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಉದಯನಿಧಿ ಸ್ಟಾಲಿನ್‌ ಅವರಿಗೆ ಸಚಿವರಾಗಿ ಮುಂದುವರಿಯಲು ಅರ್ಹತೆ ಇಲ್ಲ. ಅವರನ್ನು ಮೊದಲು ಸಂಪುಟದಿಂದ ಕೈಬಿಡಬೇಕು ಎಂದ ಬೊಮ್ಮಾಯಿ, ಡಿಎಂಕೆ ನಾಯಕರು ಅಧಿಕಾರದ ಆಸೆಗೆ ತುಷ್ಟೀಕರಣ ರಾಜಕಾರಣ ಮಾಡ್ತಿದ್ದಾರೆ. ಭಾರತದ ಜನ ಇದನ್ನ ನೋಡ್ತಿದ್ದಾರೆ. ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು.

ತಮಿಳುನಾಡಿನವರೇ ಪ್ರತಿಕ್ರಿಯೆ ಕೊಡ್ತಾರೆ ಎಂದ ಡಿಕೆ ಶಿವಕುಮಾರ್‌

ಈ ನಡುವೆ, ಉದಯನಿಧಿ ಸ್ಟಾಲಿನ್‌ ಅವರ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು, ಅದರ ಬಗ್ಗೆ ತಮಿಳುನಾಡಿನ ನಾಯಕರೇ ಸ್ಪಷ್ಟೀಕರಣ ನೀಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ : Sanatan Dharma: ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ಅವನು ಇನ್ನೂ ಬಚ್ಚಾ, ಕಣ್ಣು ತೆರೆದಿಲ್ಲ ಎಂದ ಪ್ರಮೋದ್‌ ಮುತಾಲಿಕ್‌

ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಉದಯನಿಧಿ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪುತ್ರ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಡೆಂಗೆ, ಮಲೇರಿಯಾವನ್ನು ನಾಶ ಮಾಡುವಂತೆ ಸನಾತನ ಧರ್ಮವನ್ನು ನಾಶ ಮಾಡಬೇಕು ಅಂತ ಹೇಳಿರುವುದು ಖಂಡನೀಯ ಎಂದಿದ್ದಾರೆ.

ʻʻಸನಾತನ ಧರ್ಮ ಶಾಂತಿಯ ಸಂದೇಶವನ್ನು ನೀಡಿದೆ. ಡೆಂಗೆ ಮತ್ತು ಮಲೇರಿಯಾ ರೀತಿ ಹರಡುವ ಸೊಳ್ಳೆ ಅಲ್ಲ ಇದು. ಗಂಧದ ಮರ ಇದು, ಸುಗಂಧ ಹರಡುವ ಮರ ಇದು. ಎಷ್ಟು ನಾಶ ಮಾಡ್ತಿರೋ, ಅಷ್ಟು ಹರಡುತ್ತೆ ಇದುʼʼ ಎಂದು ಮುತಾಲಿಕ್‌ ಹೇಳಿದರು.

ʻʻಸ್ಟಾಲಿನ್‌ ಪುತ್ರ ಆಡಿರುವುದು ಅತ್ಯಂತ ಕೀಳುಮಟ್ಟದ ಮಾತು. ಪೆರಿಯಾರ್‌ನಿಂದ ಹಿಡಿದು ಇಲ್ಲಿಯವರೆಗೂ ನಾಸ್ತಿಕ ವಾದ ಮಾಡುತ್ತಾ ಬಂದಿದ್ದಾರೆ. ಈ ಹೇಳಿಕೆಯಿಂದ ಬಹಳ ದೊಡ್ಡ ಅನಾಹುತ ಆಗುತ್ತದೆ. ನಿಮ್ಮ ರಾಜಕೀಯ ವ್ಯವಸ್ಥೆ ನಾಶವಾಗುತ್ತದೆ. ಹೀಗಾಗಿ ನಿಮ್ಮ ಹೇಳಿಕೆ ವಾಪಾಸ್ ಪಡೆಯಬೇಕುʼʼ ಎಂದು ಹೇಳಿದ ಮುತಾಲಿಕ್‌, ಉದಯನಿಧಿ ಸ್ಟಾಲಿನ್‌ ವಿರುದ್ಧ ಧಾರವಾಡ, ಬೆಂಗಳೂರು, ಕಲಬುರ್ಗಿ ಕೋರ್ಟ್‌ನಲ್ಲಿ ಕೇಸ್ ಹಾಕಲಿದ್ದೇವೆ ಎಂದರು.

ʻʻಶಾಸಕ ಹುಚ್ಚನ ರೀತಿ ಮಾತಾಡೋದು ಸರಿಯಲ್ಲ. ಏನೇನೋ ಹೇಳಿಕೆ ನೀಡಬಾರದು ಅನ್ನೋ ಎಚ್ಚರಿಕೆ ನೀಡುತ್ತಿದ್ದೇವೆʼʼ ಎಂದು ಪ್ರಮೋದ್‌ ಮುತಾಲಿಕ್‌ ನುಡಿದರು.

Exit mobile version