Site icon Vistara News

NET Scores: ಪಿಎಚ್‌.ಡಿ ಪ್ರವೇಶಾತಿಗೆ ನೆಟ್‌ ಅಂಕಗಳ ಪರಿಗಣನೆಗೆ ಯುಜಿಸಿ ಅಸ್ತು; ಸಿಇಟಿ ಇನ್ನಿರಲ್ಲ

UGC NET Exam

Cancelled A Day After It Was Held, New Date Announced For UGC NET Exam

ನವದೆಹಲಿ: ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ (NET) ಉತ್ತಮ ಅಂಕ ಗಳಿಸಿ, ಪಿಎಚ್‌.ಡಿ ಪ್ರವೇಶಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಸಿಹಿ ಸುದ್ದಿ ನೀಡಿದೆ. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌.ಡಿ (PhD Admissions) ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಬದಲು ಅಭ್ಯರ್ಥಿಯು ನೆಟ್‌ನಲ್ಲಿ ಗಳಿಸಿದ ಅಂಕಗಳನ್ನು (NET Scores) ಪರಿಗಣಿಸಲು ಯುಜಿಸಿಯು ಅನುಮೋದನೆ ನೀಡಿದೆ. ಇದರಿಂದ ಪಿಎಚ್‌.ಡಿ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.

ಪ್ರಸಕ್ತ ಅಂದರೆ, 2024-25ನೇ ಶೈಕ್ಷಣಿಕ ಸಾಲಿನಿಂದಲೇ ಪಿಎಚ್‌.ಡಿ ಪ್ರವೇಶಾತಿ ವೇಳೆ ಸಿಇಟಿ ಬದಲಾಗಿ ನೆಟ್‌ ಅಂಕಗಳನ್ನೇ ಪರಿಗಣಿಸಬೇಕು ಎಂಬುದಾಗಿ ಯುಜಿಸಿಯು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ (NEP) ಅಡಿಯಲ್ಲಿಯೇ ಯುಜಿಸಿಯು ಈ ತೀರ್ಮಾನ ತೆಗೆದುಕೊಂಡಿದೆ. ಕಳೆದ ಮಾರ್ಚ್‌ 13ರಂದು ನಡೆದ ಸಭೆಯಲ್ಲಿ ಯುಜಿಸಿ ನೆಟ್‌ ಪರೀಕ್ಷೆಯ ನಿಬಂಧನೆಗಳ ಮರುಪರಿಶೀಲನೆ ಕುರಿತು ರಚಿಸಿದ ತಜ್ಞರ ಸಮಿತಿಯ ಶಿಫಾರಸುಗಳ ಅನ್ವಯ ಯುಜಿಸಿ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ಮೂರು ಕೆಟಗರಿಗಳಾಗಿ ವಿಂಗಡಣೆ

ನೆಟ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಮೂರು ಕೆಟಗರಿಗಳಾಗಿ ವಿಂಗಡಣೆ ಮಾಡಲಾಗಿದೆ. ಜೆಆರ್‌ಎಫ್‌ ಹಾಗೂ ಅಸಿಸ್ಟಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಹತೆ ಪಡೆದ ನೆಟ್‌ ಅಭ್ಯರ್ಥಿಗಳು, ಜೆಆರ್‌ಎಫ್‌ ಇಲ್ಲದೆಯೇ ಪಿಎಚ್‌.ಡಿಗೆ ಪ್ರವೇಶ ಪಡೆದು ಅಸಿಸ್ಟಂಟ್‌ ಪ್ರೊಫೆಸರ್‌ ಹುದ್ದೆಗೆ ಅರ್ಹತೆ ಪಡೆದಿರುವವರು ಹಾಗೂ ಕೇವಲ ಪಿಎಚ್‌.ಡಿಗೆ ಪ್ರವೇಶ ಪಡೆದವರು ಎಂಬುದಾಗಿ ವಿಂಗಡಿಸಲಾಗಿದೆ.

ಎರಡು ಹಾಗೂ ಮೂರನೇ ಕೆಟಗರಿಯಲ್ಲಿರುವವರು ಯುಜಿಸಿ ನೆಟ್‌ ಪರೀಕ್ಷೆಯಲ್ಲಿ ಪಡೆದುಕೊಂಡ ಶೇ.70ರಷ್ಟು ಅಂಕಗಳು ಹಾಗೂ ಶೇ.30ರಷ್ಟು ಅಂಕಗಳನ್ನು ಸಂದರ್ಶನದ ಮೂಲಕ ಪರಿಗಣಿಸಿ ಪಿಎಚ್‌.ಡಿಗೆ ಪ್ರವೇಶಾತಿ ನೀಡಲಾಗುತ್ತದೆ. ಎರಡೂ ಕೆಟಗರಿಯಲ್ಲಿರುವವರಿಗೆ ನೆಟ್‌ ಅಂಕಗಳು ಒಂದು ವರ್ಷದವರೆಗೆ ಮಾನ್ಯತೆ ಪಡೆದಿರುತ್ತವೆ ಎಂದು ಯುಜಿಸಿ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral News: 4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದ ವ್ಯಕ್ತಿಯ ಉದ್ಯೋಗ ತರಕಾರಿ ಮಾರಾಟ; ಕಾರಣವೇನು?

ಯುಜಿಸಿ ನೆಟ್‌ ಪರೀಕ್ಷೆಯನ್ನು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯು (NTA) ಪ್ರತಿ ವರ್ಷ ಜೂನ್‌ ಹಾಗೂ ಡಿಸೆಂಬರ್‌ನಲ್ಲಿ ನಡೆಸುತ್ತದೆ. “ನೂತನ ಶಿಕ್ಷಣ ನೀತಿ ಅಡಿಯಲ್ಲಿ ಪಿಎಚ್‌.ಡಿ ಪ್ರವೇಶಾತಿಗೆ ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸಲು ಕೂಡ ತೀರ್ಮಾನಿಸಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಭಾರಿ ಅನುಕೂಲವಾಗಲಿದೆ” ಎಂದು ಯುಜಿಸಿ ಕಾರ್ಯದರ್ಶಿ ಪ್ರೊ.ಮನೀಶ್‌ ಆರ್.‌ ಜೋಶಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version