ನವದೆಹಲಿ: ಬಿಕಾಂ, ಬಿಎಸ್‌ಸಿ, ಬಿಎ ಸೇರಿದಂತೆ ತಾಂತ್ರಿಕೇತರ ಪಠ್ಯ ಪುಸ್ತಕಗಳನ್ನು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಭಾರತೀಯ ಲೇಖಕರು ರಚಿಸಬೇಕೆಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಚೇರ್ಮನ್ ಎಂ ಜಗದೀಶ್ ಕುಮಾರ್ ಅವರು ಹೇಳಿದ್ದಾರೆ. ಆಯೋಗವು ಭಾರತೀಯ ಪ್ರಕಾಶಕರೊಂದಿಗೆ ಸಂವಾದ ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ ಅವರು, ಕನ್ನಡವೂ ಸೇರಿದಂತೆ 12 ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ರಚಿಸುವುದು(Textbooks for Degree) ಅಗತ್ಯವಾಗಿದೆ ಎಂದು ತಿಳಿಸಿದರು.
2020ರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಭಾಗವಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಪದವಿ ಕೋರ್ಸುಗಳಿಗೆ ಭಾರತೀಯ 12 ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ರಚಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿಅತ್ಯಂತ ಜನಪ್ರಿಯ ಪಠ್ಯಪುಸ್ತಕಗಳ ಅನುವಾದವನ್ನು ಹೊರತರುವ ನಿಟ್ಟಿನಲ್ಲಿ ಯುಜಿಸಿ ಕಾರ್ಯನಿರ್ವಹಿಸುತ್ತಿದೆ.
ಪಠ್ಯ ಪುಸ್ತಕಗಳ ಸಂಬಂಧ ಎರಡು ರೀತಿಯಲ್ಲಿ ಯುಜಿಸಿ ಕಾರ್ಯ ನಿರ್ವಹಿಸುತ್ತಿದೆ. ಮೊದಲನೆಯದಾಗಿ, ಬಿಎ, ಬಿಎಸ್‌ಸಿ ಮತ್ತು ಬಿಕಾಂ ಪದವಿ ಕೋರ್ಸುಗಳಿಗೆ ಅಗತ್ಯವಿರುವ ಜನಪ್ರಿಯ ಇಂಗ್ಲಿಷ್ ಪಠ್ಯಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸುವುದು. ಎರಡನೆಯದು, ತಾಂತ್ರಿಕೇತರ ವಿಷಯಗಳ ಪಠ್ಯ ಪುಸ್ತಕಗಳನ್ನು ಬರೆಯಲು ಭಾರತೀಯ ಲೇಖಕರಿಗೆ ಪ್ರೋತ್ಸಾಹಿಸುವುದು ಎಂದು ಜಗದೀಶ್ ಕುಮಾರ್ ಅವರು ಹೇಳಿದರು.
ಯುಜಿಸಿ ಆಯೋಜಿಸಿದ್ದ ಈ ಸಂವಾದದಲ್ಲಿ ಪಿಯರ್‌ಸನ್ ಇಂಡಿಯಾ, ನರೋಸಾ ಪಬ್ಲಿಷರ್ಸ್, ವಿವಾ ಬುಕ್ಸ್, ಸೈಟೆಕ್ ಪಬ್ಲಿಷರ್ಸ್, ಎಸ್. ಚಾಂದ್ ಪಬ್ಲಿಷರ್ಸ್, ವಿಕಾಸ್ ಪಬ್ಲಿಷಿಂಗ್, ನ್ಯೂ ಏಜ್ ಪಬ್ಲಿಷರ್ಸ್, ಮಹಾವೀರ್ ಪಬ್ಲಿಕೇಷನ್ಸ್, ಯೂನಿವರ್ಸಿಟೀಸ್ ಪ್ರೆಸ್ ಮತ್ತು ಟ್ಯಾಕ್ಸ್‌ಮನ್ ಪಬ್ಲಿಷರ್ಸ್ ಸಂಸ್ಥೆಗಳು ಪ್ರತಿನಿಧಿಗಳು ಯುಜಿಸಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | Fake Universities | ದೇಶದ ನಕಲಿ ವಿವಿಗಳ ಪಟ್ಟಿ ಪ್ರಕಟಿಸಿದ ಯುಜಿಸಿ, ಕರ್ನಾಟಕದ ಒಂದು ವಿವಿಯೂ ಇದೆ!