ನವದೆಹಲಿ: ತೆರಿಗೆ ವಂಚನೆ, ಲಂಚ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು (Sanjay Bhandari) ಭಾರತಕ್ಕೆ ಹಸ್ತಾಂತರ ಮಾಡಲು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಸಮ್ಮತಿ ಸೂಚಿಸಿದೆ. ಇದರಿಂದ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮುನ್ನಡೆ ಸಿಕ್ಕಂತಾಗಿದೆ.
ಯುಪಿಎ ಅವಧಿಯಲ್ಲಿ ತರಬೇತಿ ವಿಮಾನಗಳ ಖರೀದಿ ವೇಳೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. 2016ರಲ್ಲಿ ಭಾರತದಿಂದ ಪರಾರಿಯಾದ ಭಂಡಾರಿಯನ್ನು ಲಂಡನ್‌ನಲ್ಲಿ 2020ರಲ್ಲಿ ಬಂಧಿಸಲಾಗಿತ್ತು. ಈಗ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯವು ಹಸ್ತಾಂತರಕ್ಕೆ ಅನುಮತಿ ನೀಡಿದೆ. ಆದರೆ, ಸಂಜಯ್ ಭಂಡಾರಿಗೆ ಲಂಡನ್ ಹೈಕೋರ್ಟ್ ಮೊರೆಹೋಗುವ ಅವಕಾಶವಿದೆ.
ಏನಿದು ಪ್ರಕರಣ?
2009ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ವಾಯುಪಡೆಯು 75 ತರಬೇತಿ ವಿಮಾನಗಳ ಖರೀದಿಗೆ ಟೆಂಡರ್ ಕರೆದಿತ್ತು. ಸ್ವಿಟ್ಜರ್‌ಲೆಂಡ್ ಮೂಲದ ಪೈಲಟಸ್ ಏರ್‌ಕ್ರಾಫ್ಟ್ ಎಂಬ ಕಂಪನಿಯು 2,895 ಕೋಟಿ ರೂ. ಮೊತ್ತದ ಟೆಂಡರ್ ಪಡೆಯಲು ಆಫ್‌ಸೆಟ್ ಇಂಡಿಯಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಸಂಜಯ್ ಭಂಡಾರಿ ಹಾಗೂ ಬಿಮಲ್ ಸರೀನ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಪೈಲಟಸ್ ಏರ್‌ಕ್ರಾಫ್ಟ್‌ಗೆ ಟೆಂಡರ್ ಕೊಡಿಸಲು ಸಂಜಯ್ ಭಂಡಾರಿ ಅಧಿಕಾರಿಗಳ ಮನವೊಲಿಸಿದ್ದರು. ಇದಕ್ಕಾಗಿ ಸ್ವಿಟ್ಜರ್‌ಲೆಂಡ್ ಮೂಲದ ಕಂಪನಿಯಿಂದ 350 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಹಾಗೆಯೇ, ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣಗಳೂ ಇವರ ವಿರುದ್ಧ ಇವೆ.
ಮುಂದೇನಾಗಲಿದೆ?
ಬ್ರಿಟನ್ ನ್ಯಾಯಾಲಯವು ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದರೂ ಹಲವು ಪ್ರಕ್ರಿಯೆಗಳನ್ನು ಪಾಲನೆ ಮಾಡಲಾಗುತ್ತದೆ. ಭಾರತ-ಬ್ರಿಟನ್ ಹಸ್ತಾಂತರ ಒಪ್ಪಂದದ ಪ್ರಕಾರ ಬ್ರಿಟನ್ ಗೃಹ ಕಚೇರಿಯು 28 ದಿನಗಳೊಳಗೆ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳುತ್ತದೆ. 28 ದಿನಗಳೊಳಗೆ ಸಂಜಯ್ ಭಂಡಾರಿಯು ಲಂಡನ್ ಹೈಕೋರ್ಟ್ ಮೆಟ್ಟಿಲೇರಿದರೆ, ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ತಿಳಿದುಬಂದಿದೆ.
ರಾಬರ್ಟ್ ವಾದ್ರಾ ಜತೆ ನಂಟು?
ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿಯು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಜತೆ ನಂಟು ಹೊಂದಿದ್ದಾರೆ ಎಂಬ ಮಾತುಗಳು ಕೂಡ ಇವೆ. ರಾಬರ್ಟ್ ವಾದ್ರಾ ಕೂಡ ಉದ್ಯಮಿಯಾಗಿರುವುದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಇದೆ ಎನ್ನಲಾಗಿದೆ. ಆದರೆ, ಈ ಆರೋಪವನ್ನು ವಾದ್ರಾ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ | Vijay Mallya | ಮಲ್ಯ ಸಂಪರ್ಕಕ್ಕೇ ಸಿಗುತ್ತಿಲ್ಲ, ನಾನು ವಾದ ಮಾಡಲ್ಲ, ಸುಪ್ರೀಂಗೆ ಉದ್ಯಮಿ ಪರ ವಕೀಲ ಹೇಳಿದ್ದೇನು?