ನವದೆಹಲಿ: ಉಕ್ರೇನ್ ವಿದೇಶಾಂಗ ಸಚಿವ (Ukrainian Minister) ಡಿಮಿಟ್ರೊ ಕುಲೆಬಾ (Dmytro Kuleba) ಈ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿ ಉಕ್ರೇನ್‌ನ ಸಚಿವರೊಬ್ಬರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಶಾಂತಿ ಶೃಂಗಸಭೆಗೆ ಬೆಂಬಲ ನೀಡುವಂತೆ ಮನವಿ ಮಾಡುವ ಉದ್ದೇಶದಿಂದ ಅವರು ದೆಹಲಿಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಲೇಬಾ ಅವರು ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತ-ಉಕ್ರೇನ್ ಅಂತರ್-ಸರ್ಕಾರಿ ಆಯೋಗ (India-Ukraine inter-governmental commission)ದ ಸಭೆಯ ಸಹ ಅಧ್ಯಕ್ಷತೆ ವಹಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. 1994ರಲ್ಲಿ ಸ್ಥಾಪನೆಯಾದ ಭಾರತ-ಉಕ್ರೇನ್ ಅಂತರ್-ಸರ್ಕಾರಿ ಆಯೋಗವು ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲ ಅಂಶಗಳನ್ನು ಮೇಲ್ವಿಚಾರಣೆ ನಡೆಸುತ್ತಿದೆ.
ಉಕ್ರೇನ್ ವಿದೇಶಾಂಗ ಸಚಿವರ ಭಾರತ ಭೇಟಿಯನ್ನು ಎರಡೂ ದೇಶಗಳು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಅವರು ಮಾರ್ಚ್ 28ರ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಸ್ವಿಟ್ಜರ್ಲೆಂಡ್‌ನ ಉದ್ದೇಶಿತ ಶಾಂತಿ ಶೃಂಗಸಭೆಯು ಕುಲೇಬಾ ಅವರ ಕಾರ್ಯಸೂಚಿಯ ಪಟ್ಟಿಯಲ್ಲಿನ ಮುಖ್ಯ ಅಂಶವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಉಕ್ರೇನ್-ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಚೀನಾ ಮುಂದಾಗಿದೆ. ಈ ಬೇಸಗೆಯ ವೇಳೆಗೆ ಶಾಂತಿ ಶೃಂಗಸಭೆಯನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಸ್ವಿಟ್ಜರ್ಲೆಂಡ್ ಸರ್ಕಾರ ಹೇಳಿದೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಸಾರ್ವಜನಿಕವಾಗಿ ಖಂಡಿಸಿಲ್ಲ. ಅದಾಗ್ಯೂ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಎಲ್ಲ ಮಾರ್ಗವನ್ನು ಬೆಂಬಲಿಸುವುದಾಗಿ ಪದೇ ಪದೆ ಒತ್ತಿ ಹೇಳಿದೆ.
ಕಳೆದ ವರ್ಷ ಮೇ 21ರಂದು ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದ ಉಕ್ರೇನ್ ಅಧ್ಯಕ್ಷ ಜೆಲನ್‌ಸ್ಕಿ ರಷ್ಯಾ-ಉಕ್ರೇನ್ ನಡುವಣ ಯುದ್ಧವನ್ನು ಸಮಾಪ್ತಿಗೊಳಿಸಲು ನೆರವು ಕೋರಿದ್ದರು. ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಮಾತುಕತೆ ನಡೆಸಿದ ಜೆಲನ್‌ಸ್ಕಿ ಅವರು, ತಮ್ಮ ಶಾಂತಿ ಪ್ರಸ್ತಾಪಕ್ಕೆ ಮೋದಿಯವರ ಬೆಂಬಲ ಕೋರಿದ್ದರು.
ಭಾರತವು ರಷ್ಯಾ ಮತ್ತು ಉಕ್ರೇನ್ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷರು ಬೆಂಬಲ ನಿರೀಕ್ಷಿಸಿದ್ದರು. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಉಕ್ರೇನ್ ಮತ್ತು ಭಾರತದ ನಾಯಕರು ಮುಖಾಮುಖಿಯಾಗಿದ್ದರು. ರಷ್ಯಾ-ಉಕ್ರೇನ್ ನಡುವೆ ಯುದ್ಧ ಶೀಘ್ರ ಅಂತ್ಯವಾಗಬೇಕು, ಯುದ್ಧಕ್ಕಿದು ಕಾಲವಲ್ಲ ಎಂದು ಈ ಹಿಂದೆಯೇ ಪ್ರಧಾನಿ ಮೋದಿ ಎರಡೂ ದೇಶಗಳಿಗೆ ಸಲಹೆ ನೀಡಿದ್ದರು. ಅಲ್ಲದೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕದನ ವಿರಾಮ ಘೋಷಿಸುವಂತೆ ರಷ್ಯಾ ಸರ್ಕಾರದ ಮನವೊಲಿಸಿದ್ದರು. 2022ರಲ್ಲಿ ಈ ಎರಡು ದೇಶಗಳ ನಡುವೆ ಯುದ್ಧ ಆರಂಭವಾಗಿದ್ದು ಅಪಾರ ಸಾವು-ನೋವು ಸಂಭವಿಸಿದೆ.
ಇದನ್ನೂ ಓದಿ | Russia Ukraine war | ಧಾನ್ಯ ಸಾಗಣೆಗೆ ಬಂದರು ಮುಕ್ತ: ರಷ್ಯಾ ಮತ್ತು ಉಕ್ರೇನ್ ಒಪ್ಪಂದ