ನವದೆಹಲಿ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯು ಹಲವು ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿಯಾಯಿತು. ರಾಮ ಜನ್ಮಭೂಮಿ ಹೋರಾಟದಲ್ಲಿ (Ram Janmahbumi Andolan) ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ (Uma Bharti) ಮತ್ತು ಸಾಧ್ವಿ ರಿತಂಭರಾ (Sadhvi Rithambhara) ಅವರು ಸಂತೋಷದ ಕಣ್ಣೀರಿಟ್ಟರು. ಇಬ್ಬರು ನಾಯಕಿಯರೂ ಪರಸ್ಪರ ಆಲಿಂಗಿಸಿಕೊಂಡು, ಆನಂದಭಾಷ್ಪ ಸುರಿಸಿದರು.
ಸೋಮವಾರ ನಡೆದ ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನೆಯ ಸಂತೋಷ ಮತ್ತು ಸಂಭ್ರಮವನ್ನು ಆಚರಿಸುತ್ತಾ, ಸಾಧ್ವಿಗಳಿಬ್ಬರೂ ಪರಸ್ಪರ ಅಭಿನಂದಿಸಿದರು. ಇಬ್ಬರು ಕಣ್ಣೀರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೂ ಅದರಲ್ಲಿ ಅವರು ಸೋತರು.
ರಾಮ ಜನ್ಮಭೂಮಿ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ಉಮಾ ಭಾರತಿ ಅವರು, ನಾನು ಅಯೋಧ್ಯೆಯ ರಾಮ ಮಂದಿರದ ಮುಂದೆ ಇದ್ದೇನೆ, ನಾವು ರಾಮ್ ಲಲ್ಲಾಗಾಗಿ ಕಾಯುತ್ತಿದ್ದೇವೆ ಎಂದು ಫೋಟೋದೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಣ ಪ್ರತಿಷ್ಠಾಪನೆ’ ವಿಧಿವಿಧಾನಗಳಿಗಾಗಿ ಭವ್ಯ ಮಂದಿರದ ಮೆಟ್ಟಿಲುಗಳನ್ನು ಏರುವ ನಿಮಿಷಗಳ ಮೊದಲು ಅವರು ಈ ಫೋಟೋವನ್ನು ಷೇರ್ ಮಾಡಿದ್ದರು.
Ayodhya, Uttar Pradesh | BJP leader Uma Bharti and Sadhvi Rithambara hug each other ahead of Ram Temple Pran Pratishtha ceremony today pic.twitter.com/zfFjPJoVbh
— ANI (@ANI) January 22, 2024
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಉಮಾ ಭಾರತಿ ಅವರು ಅಯೋಧ್ಯೆಯಲ್ಲಿದ್ದರು. ಧ್ವಂಸ ಮಾಡುವಾಗ ಕೇಸರಿ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಭಾರತಿ ಆಲಂಗಿಸಿಕೊಂಡ ಫೋಟೋ ಆಗ ವಿವಾದಕ್ಕೂ ಕಾರಣವಾಗಿತ್ತು. ಅಯೋಧ್ಯೆಯಲ್ಲಿ ಮಸೀದಿ ಕೆಡವುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಬ್ಬರೂ ಸಾಧ್ವಿಗಳು, ಮಾಜಿ ಕೇಂದ್ರ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ವಿನಯ್ ಕಟಿಯಾರ್, ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್ ಸೇರಿದಂತೆ ಹಲವು ದಿಗ್ಗಜರ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು. ಈ ಎಲ್ಲಾ ನಾಯಕರನ್ನು ವಿಶೇಷ ನ್ಯಾಯಾಲಯವು 2020 ರಲ್ಲಿ ಖುಲಾಸೆಗೊಳಿಸಿತು.
ನಾಳೆಯಿಂದ ಸಾರ್ವಜನಿಕರಿಗೆ ರಾಮ ಮಂದಿರ ಮುಕ್ತ; ಆರತಿ, ದರ್ಶನಕ್ಕೆ ಸಮಯ ನಿಗದಿ
ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯ ಸೋಮವಾರ ನಡೆದಿದ್ದು, ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಜ.22, ಸೋಮವಾರ ಉದ್ಘಾಟನೆಯಾಗಿರುವ ರಾಮ ಮಂದಿರವು ಜ.23, ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ(Opens To Public). ಜನರು ರಾಮ ಲಲ್ಲಾನ (Ram Lalla)ದರ್ಶನವನ್ನು ಪಡೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಈ ವೇಳೆ, ಬಾಲಿವುಡ್ ಗಣ್ಯರಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಲಿಯಾ ಭಟ್, ರಣಬೀರ್ ಕಪೂರ್ ಹಾಗೂ ಉದ್ಯಮಿ ದಂಪತಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಕೂಡ ಹಾಜರಿದ್ದರು.
ಅಯೋಧ್ಯೆಯ ರಾಮ ಮಂದಿರವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾಗಿದೆ. ಇದನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ವಹಿಸುತ್ತದೆ. ಬೆಳಗ್ಗೆ 7 ಗಂಟೆಯಿಂದ 11.30 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 7 ಗಂಟೆಯವರೆಗೆ ರಾಮ ಲಲ್ಲಾ ದರ್ಶನ ಪಡೆಯಬಹುದು. ಜಾಗರಣ/ಶೃಂಗಾರ ಆರತಿಯನ್ನು ಬೆಳಗ್ಗೆ 6.30 ಮತ್ತು ಸಂಜೆ ಸಂಧ್ಯಾರತಿ 7.30ಕ್ಕೆ ನಡೆಯುತ್ತದೆ.
ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಆರತಿ ಅಥವಾ ದರ್ಶನಕ್ಕಾಗಿ ಪಾಸ್‌ಗಳನ್ನು ಪಡೆಯಬಹುದು. ಆನ್‌ಲೈನ್ ಬುಕ್ ಮಾಡಲು, ಅಯೋಧ್ಯಾ ರಾಮ ಮಂದಿರ ಜಾಲತಾಣಕ್ಕೆ ಲಾಗಿನ್ ಆಗಬೇಕು. ಇದಕ್ಕಾಗಿ ನಿಮ್ಮ ಮೊಬೈಲ್ ನಂಬರ್ ಬಳಸಬೇಕಾಗುತ್ತದೆ. ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುವ ಒಟಿಪಿ ಮೂಲಕ ನಿಮ್ಮ ಗುರುತು ದೃಢೀಕರಿಸಬೇಕಾಗುತ್ತದೆ. ಬಳಿಕ ಮೈ ಪ್ರೊಫೈಲ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ. ಹೀಗೆ ನಿಮ್ಮ ಪಾಸ್ ಅನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Ram Mandir: ರಾಜ್ಯದೆಲ್ಲೆಡೆ ಬೆಳಗಿದ ರಾಮ ಜ್ಯೋತಿ; ದೀಪೋತ್ಸವ ಸಂಭ್ರಮದ ಕ್ಷಣಗಳು ಇಲ್ಲಿವೆ