ಭೋಪಾಲ್: ಮಧ್ಯಪ್ರದೇಶದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಹಲವು ದಿನಗಳಿಂದ ಆಗ್ರಹಿಸುತ್ತ ಬಂದಿದ್ದಾರೆ. ರಾಜ್ಯದಲ್ಲಿ ಮದ್ಯ ನಿಷೇಧ ಅಭಿಯಾನವನ್ನೂ ನಡೆಸುತ್ತಿದ್ದಾರೆ. ಅನಧಿಕೃತವಾಗಿ ತಲೆ ಎತ್ತಿದ ಲಿಕ್ಕರ್ ಶಾಪ್‌ಗಳನ್ನೆಲ್ಲ ಮೊದಲು ತೆಗೆಸಬೇಕು ಎಂದು ತಮ್ಮದೇ ಪಕ್ಷದ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿರುವ ಉಮಾಭಾರತಿ, ಮಾರ್ಚ್ ತಿಂಗಳಲ್ಲಿ ಮದ್ಯದ ಅಂಗಡಿಯೊಂದಕ್ಕೆ ಕಲ್ಲು ಎಸೆದಿದ್ದರು. ಈ ಬಾರಿ ಸೆಗಣಿ ಎಸೆದಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.
ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿರುವ ಮದ್ಯದ ಅಂಗಡಿಗೆ ಉಮಾ ಭಾರತಿ ಸೆಗಣಿ ಎಸೆದಿದ್ದಾರೆ. ʼಇಲ್ನೋಡಿ ನಾನು ಎಸೆಯುತ್ತಿರುವುದು ಕಲ್ಲಲ್ಲ, ಆಕಳಿನ ಸೆಗಣಿʼ ಎಂದು ಅವರು ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು. ಮಂಗಳವಾರ ರಾತ್ರಿ ಸರಣಿ ಟ್ವೀಟ್ ಮಾಡಿದ ಉಮಾ ಭಾರತಿ, ʼಈ ಮದ್ಯದ ಅಂಗಡಿ ಓರ್ಚಾದ ಪ್ರವೇಶ ದ್ವಾರದಲ್ಲಿಯೇ ಇದೆ. ಓರ್ಚಾದಲ್ಲಿ ರಾಮ ರಾಜಾ ದೇಗುಲವಿದೆ. ಇದೊಂದು ಪವಿತ್ರ ಪಟ್ಟಣ. ಈ ಸ್ಥಳದಲ್ಲಿ ಮದ್ಯದ ಅಂಗಡಿ ತೆರೆಯಲು ಅನುಮತಿ ಇರಲಿಲ್ಲ. ಆದರೂ ಇಲ್ಲಿ ಲಿಕ್ಕರ್ ಶಾಪ್ ತೆರೆಯಲಾಯಿತು. ಇದರ ವಿರುದ್ಧ ನಮ್ಮ ಪಕ್ಷದ ಹಲವರು ಪ್ರಮುಖರು, ಸಾಮಾನ್ಯ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ಶಾಪ್ ತೆಗೆಸುವಂತೆ ಸ್ಥಳೀಯ ಜನರು ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ನೀಡಿದ್ದಾರೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಪದೇಪದೆ ಮನವಿಯನ್ನೂ ಮಾಡಿದ್ದಾರೆ. ಅದರ ಪ್ರವೇಶದಲ್ಲೇ ಇರುವ ಮದ್ಯದ ಅಂಗಡಿ ಒಂದು ಕಪ್ಪುಚುಕ್ಕೆಯಂತೆʼ ಎಂದು ಅಸಮಾಧಾನ ಹೊರಹಾಕಿದ್ದಾರೆ.
ʼಕಳೆದ ಏಪ್ರಿಲ್‌ನಲ್ಲಿ ಓರ್ಚಾದ ದೇವಸ್ಥಾನದಲ್ಲಿ ಅದ್ಧೂರಿಯಾಗಿ ದೀಪೋತ್ಸವ ನಡೆಯುತ್ತಿತ್ತು. ಇಡೀ ಪಟ್ಟಣದಾದ್ಯಂತ ಲಕ್ಷಾಂತರ ದೀಪಗಳು ಬೆಳಗಿದ್ದವು. ಆಗ ಕೂಡ ಇಲ್ಲಿ ಮದ್ಯದಂಗಡಿ ತೆರೆದೇ ಇತ್ತು. ಹೀಗಾಗಿ ನಾನು ಹಸುವಿನ ಸೆಗಣಿಯನ್ನು ಎಸೆದಿದ್ದೇನೆʼ ಎಂದು ತಿಳಿಸಿದ್ದಾರೆ. ಇನ್ನು ಉಮಾಭಾರತಿ ತಮ್ಮ ಬೆಂಬಲಿಗರೊಂದಿಗೆ ಬಂದು ಅಂಗಡಿಗೆ ಸೆಗಣಿ ಎಸೆದ ಬಳಿಕ, ಮಾಲೀಕ ಶಾಪ್‌ನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರೂ ಕೂಡ ಇಲ್ಲಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರದ ಪರ ಕಾಂಗ್ರೆಸ್ ಹೋರಾಟ: ಬಿಜೆಪಿ ನಾಯಕರ ಗೇಲಿ