Site icon Vistara News

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Umar Khalid

Umar Khalid

ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣ ಆರೋಪಿಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಹಳೆ ವಿದ್ಯಾರ್ಥಿ ಉಮರ್ ಖಾಲಿದ್ (Umar Khalid) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಕರ್ಕರ್ದೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಖಾಲಿದ್ ಅವರ ಮನವಿಯನ್ನು ತಿರಸ್ಕರಿಸಿದರು. 2024ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡ ನಂತರ ಖಾಲಿದ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆಬ್ರವರಿ 14ರಂದು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿತ್ತು. ಆ ವೇಳೆ ಖಾಲಿದ್ ಅವರ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

“ಸನ್ನಿವೇಶಗಳ ಬದಲಾವಣೆಯಿಂದಾಗಿ ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಲಾಗುತ್ತಿದೆ ಹಾಗೂ ತನ್ನ ಕಕ್ಷಿಗಾರ ವಿಚಾರಣಾ ನ್ಯಾಯಾಲಯದಿಂದ ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುತ್ತಾರೆ” ಎಂದು ಅಂದು ಕಪಿಲ್‌ ಸಿಬಲ್ ಹೇಳಿದ್ದರು. ಜತೆಗೆ ಖಾಲಿದ್‌ ವಿರುದ್ಧ ಹೇರಲಾದ ಯುಎಪಿಎ (Unlawful Activities Prevention Act-UAPA)ಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು.

ಏನಿದು ಪ್ರಕರಣ?

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಖಾಲಿದ್‌ನಲ್ಲಿ ಬಂಧಿಸಲಾಗಿತ್ತು. ಸಿಎಎ ವಿರೋಧಿಸಿ 2020ರಲ್ಲಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅದೇ ರೀತಿ ದಿಲ್ಲಿಯಲ್ಲೂ ಹೋರಾಟಗಳು ಆರಂಭವಾಗಿದ್ದವು. ಜತೆಗೆ ಈಶಾನ್ಯ ದಿಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ದಂಗೆ ಸಂಭವಿಸಿತ್ತು. ಈ ದಂಗೆಗೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಪಿತೂರಿ ಕೂಡ ಪಿತೂರಿ ನಡೆಸಿದ್ದಾರೆಂಬ ಆರೋಪ ಇದೆ. ಉಮರ್ ಖಾಲಿದ್ ಜತೆಗೆ ಶರ್ಜೀಲ್ ಇಮಾಮ್ ಮತ್ತು ಹಲವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಹಲವಾರು ನಿಬಂಧನೆಗಳ ಅಡಿಯಲ್ಲಿ ‘ಮಾಸ್ಟರ್‌ ಮೈಂಡ್‌ಗಳು’ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ 53 ಜನರು ಸಾವಿಗೀಡಾಗಿ, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಉಮರ್ ಖಾಲಿದ್ ಮತ್ತಿತರರು ಮಾಡಿದ ಭಾಷಣವು ‘ಪೂರ್ವ ನಿಯೋಜಿತ’ ಮತ್ತು ಅವರು ಬಾಬರಿ ಮಸೀದಿ, ತ್ರಿವಳಿ ತಲಾಖ್, ಕಾಶ್ಮೀರ, ಮುಸ್ಲಿಮರ ನಿಗ್ರಹ ಮತ್ತು ಸಿಎಎ ಮತ್ತು ಎನ್‌ಆರ್‌ಸಿಯಂತಹ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಇದನ್ನೂ ಓದಿ: Delhi Riots | ಶಾರ್ಜೀಲ್ ಜಾಮೀನು ವಿಚಾರಣೆ ಮುಂದೂಡಿಕೆ, ಖಾಲಿದ್ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

ವಿಚಾರಣಾ ನ್ಯಾಯಾಲಯವು 2022ರ ಮಾರ್ಚ್‌ನಲ್ಲಿ ಖಾಲಿದ್‌ಗೆ ಜಾಮೀನು ನಿರಾಕರಿಸಿತ್ತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಹೈಕೋರ್ಟ್‌ನಲ್ಲಿಯೂ ಜಾಮೀನು ಲಭಿಸಿರಲಿಲ್ಲ. ಇದರಿಂದ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ನಂತರ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ ಮನವಿಯನ್ನು 14 ಬಾರಿ ಮುಂದೂಡಲಾಗಿತ್ತು.

Exit mobile version