ಲಖನೌ: ಉತ್ತರ ಪ್ರದೇಶ ಬಿಎಸ್‌ಪಿ ಶಾಸಕ ರಾಜು ಪಾಲ್ (Raju Pal) ಅವರ ಹತ್ಯೆಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಹತ್ಯೆಯ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ (Atiq Ahmed) ಆಪ್ತ ಗುಡ್ಡು ಮುಸ್ಲಿಂ (Guddu Muslim) ಮನೆಯನ್ನು ಉತ್ತರ ಪ್ರದೇಶ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಯಾಗರಾಜ್‌ನ ಚಕರ್ನಿರಾತುಲ್ ಪ್ರದೇಶದಲ್ಲಿರುವ ಗುಡ್ಡು ಮುಸ್ಲಿಂ ಮನೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಗುಡ್ಡು ಮುಸ್ಲಿಂ ಬಂಧನಕ್ಕೆ ಬಲೆಯನ್ನೂ ಬೀಸಿದ್ದಾರೆ.
ಉಮೇಶ್ ಪಾಲ್ ಹಾಗೂ ಅವರ ಇಬ್ಬರು ಬಾಡಿಗಾರ್ಡ್‌ಗಳನ್ನು 2023ರ ಫೆಬ್ರವರಿಯಲ್ಲಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಆರೋಪದಲ್ಲಿ ಗುಡ್ಡು ಮುಸ್ಲಿಂ ಪ್ರಮುಖನಾಗಿದ್ದು, ಈತನ ಕುರಿತು ಸುಳಿವು ನೀಡಿದವರಿಗೆ ಪೊಲೀಸರು 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಗುಡ್ಡು ಮುಸ್ಲಿಂ ಆಸ್ತಿ ಜಪ್ತಿಗೆ ಡಿಸೆಂಬರ್ 2ರಂದು ಕೋರ್ಟ್ ಆದೇಶ ಹೊರಡಿಸಿದೆ. ಮನೆ ನಿರ್ಮಾಣಕ್ಕೂ ಮುನ್ನ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು (PDA) ಗುಡ್ಡು ಮುಸ್ಲಿಂ ಮನೆಯನ್ನು ಸೀಲ್ ಮಾಡಿತ್ತು. ಈಗ ಪೊಲೀಸರು ಮನೆಯನ್ನು ಜಪ್ತಿ ಮಾಡಿದ್ದಾರೆ.
प्रयागराज: गुड्डू मुस्लिम के घर पर कुर्की की कार्रवाई शुरू
— UP-UK Daily (@UPUKDaily) December 26, 2023
5 लाख का इनामी है गुड्डू मुस्लिम
उमेश पाल हत्याकांड का आरोपी है गुड्डू#Guddumuslim @ADGZonPrayagraj pic.twitter.com/XU6N3pe6sP
“ಗುಡ್ಡು ಮುಸ್ಲಿಂ ಮನೆ ಜಪ್ತಿಯ ಕುರಿತು ಪಿಡಿಎ ಕಡೆಯಿಂದ ಅನುಮತಿ ಪಡೆದು, ಜಪ್ತಿ ಮಾಡಿದ್ದೇವೆ. ಮನೆಯಲ್ಲಿರುವ ಚರಾಸ್ತಿ ಎಲ್ಲವನ್ನೂ ಜಪ್ತಿ ಮಾಡಿದ್ದೇವೆ. ಎಲ್ಲ ವಸ್ತುಗಳನ್ನು ಎರಡು ಟ್ರಕ್‌ಗಳಲ್ಲಿ ಖುಲ್ದಾಬಾದ್ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಜಪ್ತಿ ಮಾಡಿದ ಬಳಿಕ ಪಿಡಿಎ ಅಧಿಕಾರಿಗಳು ಮನೆಯನ್ನು ಮತ್ತೆ ಸೀಲ್ ಮಾಡಿದ್ದಾರೆ” ಎಂದು ಪ್ರಯಾಗರಾಜ್ ಡಿಸಿಪಿ ದೀಪಕ್ ಭುಕರ್ ತಿಳಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಆರು ಆರೋಪಿಗಳು ಮೃತಪಟ್ಟಿದ್ದಾರೆ. ಆರು ಆರೋಪಿಗಳಲ್ಲಿ ನಾಲ್ವರು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಅತೀಕ್ ಅಹ್ಮದ್‌ನ ಹತ್ಯೆಯಾದ ಬಳಿಕ ಗುಡ್ಡು ಮುಸ್ಲಿಂ ಕಚ್ಚಾ ಬಾಂಬ್ ಎಸೆದು ಕೂಡ ಸುದ್ದಿಯಾಗಿದ್ದ.
ಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಜಾಗದಲ್ಲಿ ಬಡವರಿಗೆ 76 ಮನೆ; ಇದು ಯೋಗಿ ಸಾಮಾಜಿಕ ನ್ಯಾಯ
ರಾಜಕಾರಣಿಯಾಗಿ ಪರಿವರ್ತಿತಗೊಂಡಿದ್ದ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಕಳೆದ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅನಾಮಿಕರ ಗುಂಡೇಟಿಗೆ ಬಲಿಯಾಗಿದ್ದರು. 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಜೈಲು ಶಿಕ್ಷೆಗೆ ಒಳಗಾಗಿದ್ದ ಅವರನ್ನು ಪ್ರಯಾಗರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕೊಂಡೊಯ್ಯತ್ತಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದರು. ಅತೀಕ್ ಅಹ್ಮದ್‌ಗೆ ಗುಡ್ಡು ಮುಸ್ಲಿಂ ಆಪ್ತನಾಗಿದ್ದ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ