ಲಖನೌ: ರಾಜಕಾರಣಿಯಾಗಿ ಪರಿವರ್ತಿತಗೊಂಡಿದ್ದ ಗ್ಯಾಂಗಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅನಾಮಿಕರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. 2005ರಲ್ಲಿ ನಡೆದ ಸಮಾಜವಾದಿ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಜೈಲು ಶಿಕ್ಷೆಗೆ ಒಳಗಾಗಿದ್ದ ಅವರನ್ನು ವೈದ್ಯಕೀಯ ತಪಾಸಣೆಗೆ ಕೊಂಡೊಯ್ಯತ್ತಿದ್ದಾಗ ಘಟನೆ ನಡೆದಿದೆ ಎಂಬುದಾಗಿ ಎಎನ್ಐ ವರದಿ ಮಾಡಿದೆ.
ಅತೀಕ್ ಹಾಗೂ ಅಶ್ರಫ್ನನ್ನು ವೈದ್ಯಕೀಯ ತಪಾಸಣೆಗೆಂದು ಪೊಲೀಸರು ಕರೆದುಕೊಂಡು ಬಂದಿದ್ದರು. ಅವರಿಬ್ಬರು ಪೊಲೀಸರ ರಕ್ಷಣೆಯ ನಡುವೆ ಸಾಗುತ್ತಿದ್ದಾಗ ಹಿಂದಿನಿಂದ ಮೂರ್ನಾಲ್ಕು ಮಂದಿ ಸತತವಾಗಿ ಗುಂಡು ಹೊಡೆದಿದ್ದಾರೆ. ಸತತವಾಗಿ ಬಿದ್ದ ಗುಂಡೇಟಿನಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ರಾಜಕಾರಣಿಯಾಗಿದ್ದರು. 2005ರಲ್ಲಿ ನಡೆದ ಸಮಾಜವಾದಿ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆ ಮಾಡಿದ್ದ ಅತೀಕ್ 2017ರಿಂದ ಜೈಲಿನಲ್ಲಿದ್ದಾನೆ. ಏತನ್ಮಧ್ಯೆ, ಉತ್ತರ ಪ್ರದೇಶ ಪೊಲೀಸರು ಅತೀಕ್ ಕಟ್ಟಿದ್ದ ಗ್ಯಾಂಗ್ಸ್ಟರ್ ಸಾಮ್ರಾಜ್ಯವನ್ನು ಹೆಡೆಮುರಿ ಕಟ್ಟಿದ್ದರು. ಆತನಿಗೆ ಸೇರಿದ್ದ ಮನೆ ಅಸ್ತಿ ಎಲ್ಲವನ್ನೂ ಧ್ವಂಸ ಮಾಡಿ ಸರಕಾರದ ವಶಕ್ಕೆ ನೀಡಿದ್ದರು.
ಅತೀಕ್ ಅಹ್ಮದ್ ಜೈಲಿನಲ್ಲಿ ಇದ್ದುಕೊಂಡೇ ರಾಜು ಪಾಲ್ ಹತ್ಯಯ ಸಾಕ್ಷಿಯಾಗಿದ್ದ ಉಮೇಶ್ಪಾಲ್ನನ್ನು ಪುತ್ರನ ಮೂಲಕ ಕೊಲೆ ಮಾಡಿಸಿದ್ದ. ಅಂತೆಯೇ ಎರಡು ದಿನದ ಹಿಂದೆ ಅತೀಕ್ನ ಪುತ್ರ ಅಸಾದ್ನನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿ ಬಳಿ ಎನ್ಕೌಂಟರ್ ಮಾಡಿದ್ದರು. ಅವನಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
ಅತೀಕ್ ಅಹ್ಮದ್ನ ಈ ಮಗ ಅಸಾದ್ ಅಹ್ಮದ್ ಹೆಸರು ಉಮೇಶ್ ಪಾಲ್ ಅವರ ಕೊಲೆ ಕೇಸ್ನಲ್ಲಿ ಕೇಳಿಬಂದಿತ್ತು. ಇದೇ ಅಸಾದ್ ಜತೆಗೆ ಇನ್ನೊಬ್ಬಾತ ಗುಲಾಮ್ ಎಂಬುವನನ್ನೂ ಯುಪಿ ಪೊಲೀಸರು ಕೊಂದಿದ್ದಾರೆ. ನಾಪತ್ತೆಯಾಗಿದ್ದ ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನವನ್ನೂ ಕೂಡ ಘೋಷಿಸಲಾಗಿತ್ತು. ಅಂದಹಾಗೇ ಈ ಎನ್ಕೌಂಟರ್ ಮಾಡಿದ್ದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸ್ಪೆಶಲ್ ಟಾಸ್ಕ್ ಫೋರ್ಸ್ ತಂಡ. ಇದರ ನೇತೃತ್ವವನ್ನು ಡೆಪ್ಯೂಟಿ ಎಸ್ಪಿಗಳಾದ ನವೇಂದು ಮತ್ತು ವಿಮಲ್ ವಹಿಸಿದ್ದರು. ಇವರಿಬ್ಬರೂ ಉಮೇಶ್ ಪಾಲ್ ಕೊಲೆ ಕೇಸ್ನಲ್ಲಿ ಬೇಕಾದವರಾಗಿರುವ ಜತೆ, ಅತೀಕ್ ಅಹ್ಮದ್ನನ್ನು ಉತ್ತರ ಪ್ರದೇಶದಿಂದ ಗುಜರಾತ್ ಜೈಲಿಗೆ ಸಾಗಿಸುವ ಮಾರ್ಗದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯೋಜನೆ ರೂಪಿಸಿದ್ದರು. ಈ ಮಾಹಿತಿ ಸಿಕ್ಕಿದ್ದರಿಂದಲೇ ಅವರಿಬ್ಬರನ್ನೂ ಹಿಡಿಯಲು ಸ್ಪೆಶಲ್ ಟಾಸ್ಕ್ ಫೋರ್ಸ್ ನಿಯೋಜಿಸಲಾಗಿತ್ತು. ಪೊಲೀಸರನ್ನು ನೋಡಿದ ಅಸಾದ್ ಮತ್ತು ಗುಲಾಮ್ ಇವರ ಮೇಲೆ ದಾಳಿಗೆ ಯತ್ನಿಸಿದರು. ಆಗ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರೂ ಗಾಯಗೊಂಡಿದ್ದರು. ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಬದುಕಲಿಲ್ಲ.
ಇದನ್ನೂ ಓದಿ: ನಾನು ಸುರಕ್ಷಿತವಾಗಿ ಇರುವುದೇ ಮಾಧ್ಯಮದವರಿಂದ ಎಂದ ಅತೀಕ್ ಅಹ್ಮದ್; ಜೈಲಲ್ಲಿರುವ ಗ್ಯಾಂಗ್ಸ್ಟರ್ಗೆ ಕಾಡುತ್ತಿದೆ ಅದೊಂದು ಭಯ!
ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿ ಉಮೇಶ್ ಪಾಲ್ರನ್ನು ಫೆಬ್ರವರಿ ತಿಂಗಳಲ್ಲಿ ಪ್ರಯಾಗ್ರಾಜ್ನಲ್ಲಿ ದುಷ್ಕರ್ಮಿಗಳು ಕೊಂದಿದ್ದರು. ಈ ಹತ್ಯೆಯ ಪ್ರಮುಖ ಆರೋಪಿ ಅರ್ಬಾಜ್ ಖಾನ್ ಮತ್ತು ಇನ್ನೊಬ್ಬ ಆರೋಪಿ ವಿಜಯ್ ಚೌಧುರಿ ಅಲಿಯಾಸ್ ಉಸ್ಮಾನ್ ಎಂಬಾತನನ್ನು ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಈಗ ಇನ್ನಿಬ್ಬರು ಆರೋಪಿಗಳೂ ಯುಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಇನ್ನೊಂದೆಡೆ ಗುಜರಾತ್ನ ಸಬರಮತಿ ಜೈಲಿನಲ್ಲಿರುವ ಅತೀಕ್ ಅಹ್ಮದ್ಗೆ ಕೂಡ ಎನ್ಕೌಂಟರ್ ಭಯ ಶುರುವಾಗಿದೆ. ಆತನನ್ನು ಗುಜರಾತ್ನ ಸಬರಮತಿ ಜೈಲಲ್ಲಿ ಇಡಲಾಗಿದ್ದು, ಪ್ರಯಾಗ್ರಾಜ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಆಗಾಗ ಅವನನ್ನು ಪೊಲೀಸ್ ವಾಹನದಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಹೀಗೆ ಮಾರ್ಗಮಧ್ಯೆ ತನ್ನ ಎನ್ಕೌಂಟರ್ ಆಗಬಹುದು ಎಂಬ ಭಯದಲ್ಲಿ ಅತೀಕ್ ಅಹ್ಮದ್ ಇದ್ದಾನೆ. ಹೀಗಿರುವಾಗಲೇ ಅವನಿಗೆ ಬಹುದೊಡ್ಡ ಶಾಕ್ ಎದುರಾಗಿದ್ದು, ಮಗನನ್ನೇ ಕೊಂದು ಹಾಕಿದ್ದಾರೆ. ಇಂದು ಕೂಡ ಪ್ರಯಾಗ್ರಾಜ್ ಕೋರ್ಟ್ನಲ್ಲಿ ಅತೀಕ್ ಅಹ್ಮದ್ ವಿಚಾರಣೆ ಇತ್ತು. ಮತ್ತೆ ಆತನನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.