ನವದೆಹಲಿ: ಕಳೆದ ಆರು ವರ್ಷದಲ್ಲಿ ನಿರುದ್ಯೋಗ ದರ (Unemployment Rate) ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಉದ್ಯೋಗ ಸೃಷ್ಟಿಯಲ್ಲಿ(employment creation) ಭಾರತವು (India) ಹೊಸ ಎತ್ತರವನ್ನು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕೌಶಲ್ ದೀಕ್ಷಾಂತ್ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಾರತದ ಆರ್ಥಿಕತೆಯು ವಿಸ್ತರಿಸುತ್ತಿರುವಂತೆ ಯುವಜನರಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಉದ್ಯೋಗ ಸೃಷ್ಟಿಯು ಹೊಸ ಎತ್ತರವನ್ನು ತಲುಪಿದೆ ಮತ್ತು ಇತ್ತೀಚಿನ ಸಮೀಕ್ಷೆಯ ಪ್ರಕಾರ ನಿರುದ್ಯೋಗ ದರವು 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗವು ವೇಗವಾಗಿ ಕಡಿಮೆಯಾಗುತ್ತಿದೆ. ಇದರರ್ಥ ಅಭಿವೃದ್ಧಿಯ ಪ್ರಯೋಜನಗಳು ಹಳ್ಳಿಗಳು ಮತ್ತು ನಗರಗಳನ್ನು ಸಮಾನವಾಗಿ ತಲುಪುತ್ತಿವೆ ಮತ್ತು ಇದರ ಪರಿಣಾಮವಾಗಿ, ಹೊಸ ಅವಕಾಶಗಳು ಹಳ್ಳಿಗಳು ಮತ್ತು ನಗರಗಳಲ್ಲಿ ಸಮಾನವಾಗಿ ಹೆಚ್ಚುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಹಿಂದಿನ ಸರ್ಕಾರಗಳಲ್ಲಿ ಕೌಶಲಾಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, “ನಮ್ಮ ಸರ್ಕಾರ ಕೌಶಲ್ಯದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಮತ್ತು ಅದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದೆ ಮತ್ತು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದೆ” ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Unemployment: ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಭಾರತದ ನಿರುದ್ಯೋಗ ದರ ಏರಿಕೆ!
ಕೌಶಲ, ಮರು ಕೌಶಲ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವೇಗವಾಗಿ ಬದಲಾಗುತ್ತಿರುವ ಬೇಡಿಕೆಗಳು ಮತ್ತು ಉದ್ಯೋಗಗಳ ಸ್ವರೂಪವನ್ನು ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಕೌಶಲ್ಯಗಳನ್ನು ಉನ್ನತೀಕರಿಸಲು ಒತ್ತು ನೀಡಬೇಕು ಎಂದು ಹೇಳಿದರು. ಕೈಗಾರಿಕೆ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಪ್ರಸ್ತುತ ಕಾಲಕ್ಕೆ ಹೊಂದಿಕೆಯಾಗುವುದು ಬಹಳ ಮುಖ್ಯ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಹೊಸ ಐಟಿಐ ಸೀಟುಗಳನ್ನು ಸೇರಿಸಿ ಸುಮಾರು 5,000 ಹೊಸ ಐಟಿಐಗಳನ್ನು (ಕೈಗಾರಿಕಾ ತರಬೇತಿ ಸಂಸ್ಥೆಗಳು) ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತದಲ್ಲಿ ಕೌಶಲ ಅಭಿವೃದ್ಧಿಯ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ. ನಾವು ಕೇವಲ ಮೆಕ್ಯಾನಿಕ್‌ಗಳು, ಎಂಜಿನಿಯರ್‌ಗಳು, ತಂತ್ರಜ್ಞಾನ ಅಥವಾ ಯಾವುದೇ ಇತರ ಸೇವೆಗಳಿಗೆ ಸೀಮಿತವಾಗಿಲ್ಲ. ಡ್ರೋನ್ ತಂತ್ರಜ್ಞಾನಕ್ಕಾಗಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.