Site icon Vistara News

Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಮುಹೂರ್ತ ಫಿಕ್ಸ್; ವಿಧೇಯಕ ಕೂಡ ರೆಡಿ

Uniform Civil Code Bill In Monsoon Session

Uniform Civil Code bill to be tabled in Parliament monsoon session: Sources Say

ನವದೆಹಲಿ: ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಕುರಿತು ಚರ್ಚೆಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಕುರಿತು ಕಾನೂನು ಆಯೋಗವು ಅಭಿಪ್ರಾಯ ಸಂಗ್ರಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಏಕರೂಪ ನಾಗರಿಕ ಸಂಹಿತೆ ಪರ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ, ಜುಲೈನಲ್ಲಿ ಆರಂಭವಾಗುವ ಸಂಸತ್‌ ಮುಂಗಾರು ಅಧಿವೇಶನದಲ್ಲಿಯೇ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಜುಲೈ ಮೂರನೇ ವಾರದಲ್ಲಿ ಸಂಸತ್‌ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇದೇ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆಯಾಗಿ, ಅನುಮೋದನೆ ದೊರೆತರೆ ಕಾಯ್ದೆ ಜಾರಿಗೆ ಬರಲಿದೆ. ಇದೇ ಕಾರಣಕ್ಕೆ ಜುಲೈ 3ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಹಾಗೂ ನ್ಯಾಯದ ಸಂಸದೀಯ ಸ್ಥಾಯಿ ಸಮಿತಿ ಹಾಗೂ ಕಾನೂನು ಆಯೋಗದ ಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಿ, ವಿಧೇಯ ಸಿದ್ಧವಾದರೆ, ಆ ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗುತ್ತದೆ. ಸ್ಥಾಯಿ ಸಮಿತಿಯು ವಿಧೇಯಕದ ಕುರಿತು ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. ಇದಾದ ಬಳಿಕ ವಿಧೇಯಕವನ್ನು ಸಂಸತ್‌ ಮುಂಗಾರು ಅಧಿವೇಶನದ ವೇಳೆ ಎರಡೂ ಸದನಗಳಲ್ಲಿ ಮಂಡಿಸಲಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರ ಅಂದುಕೊಂಡಂತೆ ಆದರೆ, ಇದೇ ವರ್ಷ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ.

ಸಂಹಿತೆ ಕುರಿತು ಮೋದಿ ಮಾತು

ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಪರ ಮಾತನಾಡಿದ್ದಾರೆ.
ಕೆಲವರು ಈಗ ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸಂವಿಧಾನ ಕೂಡ ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ” ಎಂದಿದ್ದಾರೆ. ಆದರೆ, ಪ್ರತಿಪಕ್ಷಗಳು ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ವಿರೋಧಿಸುತ್ತಿವೆ.

ಇದನ್ನೂ ಓದಿ: Uniform Civil Code: ಓವೈಸಿಗೆ ಕುರಾನ್‌ ಮುಖ್ಯ, ಸಂವಿಧಾನ ಅಲ್ಲ;‌ ಬಿಜೆಪಿಯ ಗೌರವ್‌ ಭಾಟಿಯಾ ಚಾಟಿ

ಏನಿದು ಏಕರೂಪ ನಾಗರಿಕ ಸಂಹಿತೆ?

ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version