ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ಕಾಲ ಸನ್ನಿಹಿತವಾಗಿದೆ. ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸರ್ಕಾರ ರಚಿಸಿದ ಏಕರೂಪ ನಾಗರಿಕ ಸಂಹಿತೆ ತಜ್ಞರ ಸಮಿತಿಯು (Uniform Civil Code Expert Committee) ಇಂದು (ಫೆಬ್ರವರಿ 2) ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯ ಕರಡು ಸಲ್ಲಿಕೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ತಜ್ಞರ ಸಮಿತಿ ಚೇರ್ಮನ್ ನ್ಯಾ. ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡು ರಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನೀಡಲಾಗುತ್ತದೆ. ಕರಡು ಸಲ್ಲಿಕೆಯಾದ ಬಳಿಕ ಶನಿವಾರ (ಫೆಬ್ರವರಿ 3) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದಾದ ನಂತರ, ಫೆಬ್ರವರಿ 6ರಂದು ವಿಧಾನಸಭೆಯಲ್ಲಿ ಕರಡು ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕರಡು ಸಲ್ಲಿಕೆ ಕುರಿತು ಪುಷ್ಕರ್ ಸಿಂಗ್ ಧಾಮಿ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಇಂದು ಬೆಳಗ್ಗೆ 11 ಗಂಟೆಗೆ ಏಕರೂಪ ನಾಗರಿಕ ಸಂಹಿತೆಯ ಕರಡು ಸಲ್ಲಿಕೆಯಾಗುತ್ತದೆ. ಇದಾದ ಬಳಿಕ ಪರಿಶೀಲನೆ ನಡೆಸಲಾಗುತ್ತದೆ. ನಂತರ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ, ಜಾರಿಗೆ ತರಲಾಗುತ್ತದೆ. ಇದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ ಭಾರತ ಶ್ರೇಷ್ಠ ಭಾರತ’ ಕನಸು ನನಸು ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಕರಡು ಸಲ್ಲಿಕೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಪುಷ್ಕರ್ ಸಿಂಗ್ ಧಾಮಿ ಅವರು ಸೂಚಿಸಿದ್ದಾರೆ.
समान नागरिक संहिता लागू करने के उद्देश्य से ड्राफ्ट तैयार करने के लिए गठित कमेटी आज देहरादून में 11 बजे मसौदा सौंपेगी। जिसकी समीक्षा करने के उपरांत हम आगामी विधानसभा सत्र में विधेयक लाकर समान नागरिक संहिता को प्रदेश में लागू करने की दिशा में आगे बढ़ेंगे।
— Pushkar Singh Dhami (@pushkardhami) February 2, 2024
आज का दिन हम सभी…
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ನಿರ್ಣಯ ಅಂಗೀಕರಿಸಿದ ಕೇರಳ ರಾಜ್ಯ ವಿಧಾನಸಭೆ
ಕರಡಲ್ಲಿ ಏನಿದೆ?
ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಒಂದು ಕಾನೂನನ್ನು ರೂಪಿಸುವ ಕುರಿತು ಕರಡಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ, ವಿವಾಹ ನೋಂದಣಿ, ವಿಚ್ಛೇದನ, ಆಸ್ತಿ ಹಕ್ಕುಗಳು, ಅಂತರ-ರಾಜ್ಯ ಆಸ್ತಿ ಹಕ್ಕುಗಳು, ನಿರ್ವಹಣೆ, ಮಕ್ಕಳ ಪಾಲನೆ ಇತ್ಯಾದಿಗಳಂತಹ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆ ತರುವ ಉದ್ದೇಶ ಹೊಂದಿದೆ. ಪ್ರಸ್ತಾವಿತ ಶಾಸನವು ಮದುವೆಯ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಅಥವಾ ಇತರ ಆಚರಣೆಗಳನ್ನು ಸ್ಪರ್ಶಿಸಿಲ್ಲ. ಲಿವ್-ಇನ್ ಸಂಬಂಧಗಳ ನೋಂದಣಿ ಕೂಡ ಕಡ್ಡಾಯವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ