Site icon Vistara News

Uniform Civil Code: ಏಕರೂಪ ನಾಗರಿಕ ಸಂಹಿತೆಗೆ 75 ಲಕ್ಷ ಜನ ಪ್ರತಿಕ್ರಿಯೆ, ಜಾರಿ ಬಗ್ಗೆ ಅಂತಿಮ ತೀರ್ಮಾನ ಯಾವಾಗ?

Uniform Civil Code

ನವದೆಹಲಿ: ದೇಶದಲ್ಲಿ ಎಲ್ಲ ಧರ್ಮೀಯರಿಗೂ ಒಂದೇ ಕಾನೂನು ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಕುರಿತು 22ನೇ ಭಾರತೀಯ ಕಾನೂನು ಆಯೋಗವು ಜನರಿಂದ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅಭಿಯಾನ ಆರಂಭಿಸಿದ 30 ದಿನಗಳಲ್ಲಿ 75 ಲಕ್ಷ ಜನ ಅಭಿಪ್ರಾಯ ತಿಳಿಸಿದ್ದಾರೆ. ಜನರ ಅಭಿಪ್ರಾಯವನ್ನು ಆಧರಿಸಿ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಕಾನೂನು ಆಯೋಗವು 30 ದಿನ ಅವಕಾಶ ನೀಡಿತ್ತು. ಜುಲೈ 14ರವರೆಗೆ ಜನ ಅಭಿಪ್ರಾಯ ತಿಳಿಸಬಹುದಿತ್ತು. ಅದರಂತೆ, 75 ಲಕ್ಷ ಜನ ಅಭಿಪ್ರಾಯ ತಿಳಿಸಿದ್ದಾರೆ. ಇವುಗಳಲ್ಲಿ 2 ಲಕ್ಷ ಜನರ ಅಭಿಪ್ರಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಜನ ಏಕರೂಪ ನಾಗರಿಕ ಸಂಹಿತೆ ಪರ ಅಭಿಪ್ರಾಯ ತಿಳಿಸಿದ್ದರೆ, ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತದೆ ಎನ್ನಲಾಗಿದೆ. ಇನ್ನು ಜುಲೈ 28ರಿಂದಲೇ ಜನರ ಪ್ರತಿಕ್ರಿಯೆಗಳ ವಿಶ್ಲೇಷಣೆ ನಡೆಯಲಿದೆ ಎಂದು ಕಾನೂನು ಆಯೋಗ ತಿಳಿಸಿದೆ.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ಅದರಲ್ಲೂ, ನ್ಯಾಯಾಲಯಗಳು ಕೂಡ ಸಂಹಿತೆ ಜಾರಿಗೊಳಿಸಿವೆ ಎಂದಿವೆ. ಇನ್ನು ಕೆಲವು ಇಸ್ಲಾಂ ಧಾರ್ಮಿಕ ಮುಖಂಡರು, ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆಯ ಜಾರಿಯನ್ನು ವಿರೋಧಿಸಿವೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಸಂಹಿತೆ ಜಾರಿ ಪರವಾಗಿ ಮಾತನಾಡಿದ್ದಾರೆ. ಈಗ ಜನರ ಅಭಿಪ್ರಾಯ ಏನಿದೆ ಎಂಬುದರ ಮೇಲೆ ಸಂಹಿತೆ ಜಾರಿಯ ಭವಿಷ್ಯ ಇದೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯಿಂದ ತಾರತಮ್ಯ ನಿರ್ಮೂಲನೆ: ರೋಹಿತ್ ಚಕ್ರತೀರ್ಥ

ಏನಿದು ಏಕರೂಪ ನಾಗರಿಕ ಸಂಹಿತೆ?

ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.

Exit mobile version