Site icon Vistara News

Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ; ರಾಜ್ಯಗಳಿಗೆ ಜವಾಬ್ದಾರಿ ನೀಡಲು ಕೇಂದ್ರದ ಚಿಂತನೆ?

Uniform Civil Code

Uniform Civil Code

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯ ಬಗ್ಗೆ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಕುರಿತಾದ ಕಾನೂನನ್ನು ಸಂಸತ್ತಿನ ಮೂಲಕ ಜಾರಿಗೆ ತರದೆ ರಾಜ್ಯಗಳಿಗೆ ಅಧಿಕಾರ ನೀಡಲು ಮುಂದಾಗಿದೆ ಎಂದು ಬಿಜೆಪಿ (BJP)ಯ ಮೂಲಗಳು ತಿಳಿಸಿವೆ.

ಈಗಾಗಲೇ ಉತ್ತರಾಖಂಡ (Uttarakhand) ಸರ್ಕಾರವು ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು ಪಾಸು ಮಾಡಿದೆ. ಆ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಸ್ವತಂತ್ರ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಫೆಬ್ರವರಿಯಲ್ಲಿ, ಬಿಜೆಪಿ ಆಡಳಿತವಿರುವ ಉತ್ತರಾಖಂಡವು ಯುಸಿಸಿ ಮಸೂದೆಯನ್ನು ಅಂಗೀಕರಿಸಿದ ಬಳಿಕ ಇಲ್ಲಿ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕಾಗಿ ಸಾಮಾನ್ಯ ಕಾನೂನು ಅನ್ವಯವಾಗುತ್ತದೆ. ಗೋವಾದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಪೋರ್ಚುಗೀಸ್ ಆಡಳಿತವಿದ್ದಾಗಲೇ ಗೋವಾದಲ್ಲಿ ನಾಗರಿಕ ಸಂಹಿತೆ ಅನುಷ್ಠಾನಗೊಂಡಿದೆ.

ಹೀಗಾಗಿ ಇತರ ಬಿಜೆಪಿ ಆಡಳಿತದ ರಾಜ್ಯಗಳು ಶೀಘ್ರದಲ್ಲೇ ಇದನ್ನು ಜಾರಿಗೊಳಿಸಲಿವೆ ಎಂಬ ಭರವಸೆ ಪಕ್ಷಕ್ಕಿದೆ. ಗುಜರಾತ್ ಮತ್ತು ಅಸ್ಸಾಂನಂತಹ ರಾಜ್ಯಗಳು ಈಗಾಗಲೇ ಯುಸಿಸಿ ಕಾನೂನುಗಳನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿವೆ.

ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ವಿಷಯದ ಬಗ್ಗೆ ಮಾತನಾಡಿ, ಕಾನೂನು ಆಯೋಗದ ಮೌಲ್ಯಮಾಪನಕ್ಕಾಗಿ ಕಾಯುತ್ತಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರ ಸೇರಿದಂತೆ ಭಾರತದ ಎಲ್ಲ ನಾಗರಿಕರಿಗೆ ಅನ್ವಯವಾಗುವ, ಅವರ ಧರ್ಮವನ್ನು ಲೆಕ್ಕಿಸದೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಂಪಾಗಿ ಏಕರೂಪ ನಾಗರಿಕ ಸಂಹಿತೆ ಎಂದು ಕರೆಯಲಾಗುತ್ತದೆ. ಈಗ ಅಸ್ತಿತ್ವದಲ್ಲಿರುವ ವೈವಿಧ್ಯಮಯ, ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಗುರಿಯನ್ನು ಇದು ಹೊಂದಿದೆ.

ಸಂವಿಧಾನ ಏನು ಹೇಳಿದೆ?

ಸಂವಿಧಾನದ ʼರಾಜ್ಯ ನೀತಿ ನಿರ್ದೇಶಕ ತತ್ವʼಗಳಲ್ಲಿ ಒಂದಾದ ಸಂವಿಧಾನದ 44ನೇ ವಿಧಿಯು ʼʼಭಾರತದ ಭೂ ಪ್ರದೇಶದಾದ್ಯಂತ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸರ್ಕಾರ ಪ್ರಯತ್ನಿಸಬೇಕುʼʼ ಎಂದು ಹೇಳಿದೆ. ಆದರೆ ಆರ್ಟಿಕಲ್ 37 ಹೇಳುವಂತೆ, ನಿರ್ದೇಶಕ ತತ್ವಗಳು ಸರ್ಕಾರಿ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ ಅಷ್ಟೇ. ಇವುಗಳನ್ನು ನ್ಯಾಯಾಲಯದ ಮೂಲಕ ಪಟ್ಟು ಹಿಡಿದು ಜಾರಿಗೊಳಿಸಲಾಗುವುದಿಲ್ಲ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

ಪಕ್ಷಗಳ ನಿಲುವೇನು?

ಯುಸಿಸಿ ಜಾರಿಗೊಳಿಸುವ ಬಗ್ಗೆ ಎನ್‌ಡಿಎ ಮಿತ್ರಪಕ್ಷಗಳಲ್ಲಿ ಇನ್ನೂ ಗೊಂದಲವಿದೆ. ಬಿಜೆಪಿ, ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಮತ್ತು ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒಲವು ವ್ಯಕ್ತಪಡಿಸಿವೆ. ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ, ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಮತ್ತು ಎಚ್‌.ಡಿ.ದೇವೇಗೌಡ ಅವರ ಜೆಡಿಎಸ್‌ ಇನ್ನೂ ತಮ್ಮ ನಿರ್ಧಾರ ತಿಳಿಸಿಲ್ಲ. ಇತ್ತ ಪ್ರತಿಪಕ್ಷಗಳ ಇಂಡಿ ಒಕ್ಕೂಟ ಯುಸಿಸಿ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿಯೂ ಯುಸಿಸಿ ಜಾರಿ ಬಗ್ಗೆ ಪ್ರಸ್ತಾವಿಸಿದೆ.

Exit mobile version