ನವದೆಹಲಿ: ಗಲಭೆ, ಗುಂಪು ಹತ್ಯೆ ಪ್ರಕರಣಗಳ ಸಂತ್ರಸ್ತರಿಗೆ ಏಕರೂಪ ಪರಿಹಾರ ನೀಡುವ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್(Supreme Court) ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಈ ಸಂಬಂಧ ಇಂಡಿಯನ್ ಮುಸ್ಲಿಮ್ ಫಾರ್ ಪ್ರೊಗ್ರೆಸ್ ಆ್ಯಂಡ್ ರಿಫಾರ್ಮ್ ಎಂಬ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರಣೆ ನಡೆಸಿದ ಜಸ್ಟೀಸ್ ಕೆ ಎಂ ಜೋಸೆಫ್ ಹಾಗೂ ಜಸ್ಟೀಸ್ ಬಿ ವಿ ನಾಗರತ್ನ ಅವರಿದ್ದ ಪೀಠವು, ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿದೆ.
2018ರ ತೆಹ್ಸೀನ್ ಪೂನಾವಾಲ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಗುಂಪು ಹತ್ಯೆ ಮತ್ತು ಗುಂಪು ಹಿಂಸಾಚಾರ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆ ರೂಪಿಸಿವೆ. ಆದರೆ, ಈ ಸಂಬಂಧ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜಾವೇದ್ ಶೇಖ್ ಅವರು, ಅಪರಾಧ ದಂಡ ಸಂಹಿತೆ(CrPC)ಯ ಸೆಕ್ಷನ್ 357ಎ ಅಡಿ ಈ ಸ್ಕೀಮುಗಳನ್ನು ರೂಪಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ದೈಹಿಕ ಹಾನಿ, ಮಾನಸಿಕ ಹಾನಿ ಮತ್ತು ಗಳಿಕೆಯ ನಷ್ಟ, ಉದ್ಯೋಗ ಇತ್ಯಾದಿಗಳನ್ನು ಪರಿಗಣಿಸಲು ನ್ಯಾಯಾಲಯವು ರಾಜ್ಯಗಳಿಗೆ ಸೂಚಿಸಿದೆ ಮತ್ತು ಅವರು ಇದಕ್ಕಾಗಿ 2018ರ ತೀರ್ಪನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು.
ಪರಿಹಾರ ವಿತರಣೆಯಲ್ಲಿ ಏಕರೂಪತೆ ಇಲ್ಲದ್ದರಿಂದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆಲವು ಸಂತ್ರಸ್ತರಿಗೆ ಭಾರೀ ಮೊತ್ತದ ಪರಿಹಾರ ದೊರೆತರೆ, ಮತ್ತೆ ಕೆಲವರಿಗೆ ತೀರಾ ಅಲ್ಪ ಪ್ರಮಾಣದ ಪರಿಹಾರ ನೀಡಲಾಗುತ್ತಿದೆ ಎಂಬ ಸಂಗತಿಯನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು.
ಈ ಸಂಬಂಧ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿರುವ ಸುಪ್ರೀಂ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದೆ. ಈ ಸಂಬಂಧ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಹೇಗೆ ಪಾಲನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಲ್ಲಿಸುವಂತೆ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: Godhra Train Burning Case: ಎಂಟು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು; ನಾಲ್ವರ ಅರ್ಜಿ ತಿರಸ್ಕಾರ
ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಎರಡು ದ್ವೇಷ ಅಪರಾಧ ಪ್ರಕರಣಗಳನ್ನು ಉದಾಹರಣೆಯಾಗಿ ನೀಡಲಾಗಿದೆ. ಜೂನ್ ತಿಂಗಳಲ್ಲಿ ಕೊಲೆಯಾದ ಕನ್ಹಯ್ಯಲಾಲ್ ಕುಟಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಅದೇ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಗೋ ರಕ್ಷಕರು ಅಪಹರಣ ಮಾಡಿ, ಜೀವಂತವಾಗಿ ಸುಟ್ಟು ಹಾಕಿದರು. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇವಲ ಪರಿಹಾರವಾಗಿ 5 ಲಕ್ಷ ರೂ. ನೀಡಲಾಗಿದೆ ಎಂದು ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾಗಿದೆ.