Site icon Vistara News

Union budget 2023 : ಅಮೃತ ಕಾಲದ ಅಭಿವೃದ್ಧಿ; ಸ್ಕಿಲ್‌ ಇಂಡಿಯಾ, ಎಐ ಸೆಂಟರ್‌ಗಳ ಮೂಲಕ ಹೊಸ ಕಾಲದತ್ತ ಕಣ್ಣು

Budget 2024, What are the differences between Interim Budget and vote-on-account?

ನವ ದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಮೃತ ಕಾಲದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. ಏನೇನು ಮುಖ್ಯ ಅಂಶಗಳು ಅನ್ನುವ ಮಾಹಿತಿ ಇಲ್ಲಿದೆ.

ತೋಟಗಾರಿಕಾ ಬೆಳೆಗಳಿಗಾಗಿ ಆತ್ಮ ನಿರ್ಭರ್‌ ಕ್ಲೀನ್ ಪ್ಲಾಂಟ್‌
ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗರಹಿತ, ಗುಣಮಟ್ಟದ ಬೆಳೆಯ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು 2200 ಕೋಟಿ ರೂ. ವೆಚ್ಚದಲ್ಲಿ ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.

೧೫೭ ಹೊಸ ನರ್ಸಿಂಗ್‌ ಕಾಲೇಜು
-2014ರಿಂದ ಸ್ಥಾಪಿತವಾಗಿ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು.
-3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೇಮಕ ಮಾಡಲಾಗುವುದು.‌

ರೈಲ್ವೇಗೆ ೨.೪೦ ಲಕ್ಷ ಕೋಟಿ ಬಂಡವಾಳ
ರೈಲ್ವೇಗೆ 2.40 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಒದಗಿಸಲಾಗಿದೆ, ಇದು ಇದುವರೆಗಿನ ಅತಿ ಹೆಚ್ಚು ಮತ್ತು 2013-14ರಲ್ಲಿ ಮಾಡಿದ ವೆಚ್ಚದ ಒಂಬತ್ತು ಪಟ್ಟು ಹೆಚ್ಚಳವಾಗಿದೆ.

ಆವಾಸ್‌ ಯೋಜನೆಯ ವೆಚ್ಚ ಹೆಚ್ಚಳ
-ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ. 66ರಷ್ಟು ಹೆಚ್ಚಳದೊಂದಿಗೆ 79,000 ಕೋಟಿ ರೂ.ಗಳಿಗೆ ಏರಿಸಲಾಗುವುದು.
-ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್‌) ಯನ್ನು ಆದ್ಯತಾ ವಲಯದ ಸಾಲದ ಕೊರತೆಯ ಬಳಕೆಯ ಮೂಲಕ ಸ್ಥಾಪಿಸಲಾಗುವುದು, ಇದನ್ನು ರಾಷ್ಟ್ರೀಯ ವಸತಿ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ನಗರ ಮೂಲಸೌಕರ್ಯವನ್ನು ನಿರ್ಮಿಸಲು ಸಾರ್ವಜನಿಕ ಏಜೆನ್ಸಿಗಳ ಮೂಲಕ ಬಳಸಲಾಗುತ್ತದೆ.

ಡಿಜಿ ಲಾಕರ್‌ನಲ್ಲಿ ದಾಖಲೆಗಳು ಸುರಕ್ಷಿತ
ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಎಂಎಸ್‌ಎಂಇಗಳು, ದೊಡ್ಡ ವ್ಯಾಪಾರ ಮತ್ತು ಚಾರಿಟಬಲ್ ಟ್ರಸ್ಟ್‌ಗಳ ಬಳಕೆಗಾಗಿ ಸಂಸ್ಥೆಗಳ ಡಿಜಿಲಾಕರ್ ಅನ್ನು ಸ್ಥಾಪಿಸಲಾಗುತ್ತದೆ.

ಹೊಸ ಶ್ರೇಣಿಯ ಅವಕಾಶಗಳು, ವ್ಯಾಪಾರ ಮಾದರಿಗಳು ಮತ್ತು ಉದ್ಯೋಗ ಸಾಮರ್ಥ್ಯವನ್ನು ಬಳಸಿಕೊಳ್ಳಲು 5ಜಿ ಸೇವೆಗಳನ್ನು ಆಧರಿಸಿದ ಅಪ್ಲಿಕೇಶನ್ ಅಭಿವೃದ್ಧಿಗಾಗಿ 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.

ಜೈವಿಕ ಇನ್‌ಪುಟ್‌ ಸಂಪನ್ಮೂಲ ಕೇಂದ್ರ
ರೈತರು ಸಹಜ ಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಇದಕ್ಕಾಗಿ 10,000 ಜೈವಿಕ ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ, ರಾಷ್ಟ್ರಮಟ್ಟದ ವಿತರಣಾ ಸೂಕ್ಷ್ಮ ರಸಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಜಾಲವನ್ನು ರಚಿಸಲಾಗುವುದು.

೩೦ ಸ್ಕಿಲ್‌ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರ
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಆರಂಭಿಸಲಾಗುವುದು. ಕೋಡಿಂಗ್, ಎಐ, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ, 3ಡಿ ಪ್ರಿಂಟಿಂಗ್, ಡ್ರೋನ್ಸ್ ಮತ್ತು ಸಾಫ್ಟ್ ಸ್ಕಿಲ್‌ಗಳಂತಹ ಉದ್ಯಮ 4.0ಗಾಗಿ ಹೊಸ ತಲೆಮಾರಿನ ಕೋರ್ಸ್‌ಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ನೀಡಲಾಗುವುದು.
ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ಯುವಕರನ್ನು ಸಿದ್ಧಪಡಿಸಲು 30 ಸ್ಕಿಲ್ ಇಂಡಿಯಾ ಅಂತರರಾಷ್ಟ್ರೀಯ ಕೇಂದ್ರಗಳನ್ನು ವಿವಿಧ ರಾಜ್ಯಗಳಾದ್ಯಂತ ಸ್ಥಾಪಿಸಲಾಗುವುದು.

ಎಂಎಸ್‌ಎಂಇಗಳಿಗೆ ಸಾಲ ಖಾತ್ರಿ ಯೋಜನೆ
9,000 ಕೋಟಿ ರೂಪಾಯಿಗಳ ಮರುಭರ್ತಿಯ ಮೂಲಕ 1ನೇ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಎಂ ಎಸ್‌ಎಂಇಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಯೋಜನೆ. ಈ ಯೋಜನೆಯು 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಮೇಲಾಧಾರ ರಹಿತ ಖಾತರಿಯ ಸಾಲವನ್ನು ಒದಗಿಸುತ್ತದೆ ಮತ್ತು ಸಾಲದ ವೆಚ್ಚವನ್ನು ಸುಮಾರು 1 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.
-ಕಂಪನಿಗಳ ಕಾಯಿದೆಯ ಅಡಿಯಲ್ಲಿ ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಲಾದ ವಿವಿಧ ನಮೂನೆಗಳ ಕೇಂದ್ರೀಕೃತ ನಿರ್ವಹಣೆಯ ಮೂಲಕ ಕಂಪನಿಗಳಿಗೆ ತ್ವರಿತ ಪ್ರತಿಕ್ರಿಯೆಗಾಗಿ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು.
– ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.

ಕೃಷಿ ಸ್ಟಾರ್ಟಪ್‌ಗಳಿಗೆ ಉತ್ತೇಜನ
-ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಲ್ಲಿ ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು.
-ಭಾರತವನ್ನು ‘ಶ್ರೀ ಅನ್ನ’ಕ್ಕೆ ಜಾಗತಿಕ ಕೇಂದ್ರವನ್ನಾಗಿ ಮಾಡಲು, ಅತ್ಯುತ್ತಮ ಅಭ್ಯಾಸಗಳು, ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಳ್ಳಲು ಹೈದರಾಬಾದ್‌ ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ಶ್ರೇಷ್ಠತಾ ಕೇಂದ್ರವಾಗಿ ರೂಪಿಸಲಾಗುತ್ತದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ
20 ಲಕ್ಷ ಕೋಟಿ ರೂ. ಕೃಷಿ ಸಾಲವನ್ನು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ನೀಡಲಾಗುವುದು.
ಮೀನುಗಾರರು, ಮೀನು ಮಾರಾಟಗಾರರು ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು, ಮೌಲ್ಯ ಸರಪಳಿ ದಕ್ಷತೆಯನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು 6,000 ಕೋಟಿ ರೂ. ಗುರಿಯ ಹೂಡಿಕೆಯೊಂದಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಹೊಸ ಉಪ-ಯೋಜನೆಯನ್ನು ಪ್ರಾರಂಭಿಸಲಾಗುವುದು.

ಕೃಷಿಗಾಗಿ ಡಿಜಿಟಲ್‌ ಮೂಲಸೌಕರ್ಯ
-ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ ಮೂಲವಾಗಿಸಲು, ಮುಕ್ತ ಗುಣಮಟ್ಟ ಮತ್ತು ಅಂತರ್ ಕಾರ್ಯಸಾಧ್ಯ ಸಾರ್ವಜನಿಕ ಸರಕನ್ನು ಒಳಗೊಂಡ ರೈತ ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸಲು ಮತ್ತು ಕೃಷಿ-ಟೆಕ್ ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಬೆಂಬಲ ನೀಡಲು ನಿರ್ಮಿಸಲಾಗುವುದು.
-2,516 ಕೋಟಿ ರೂ. ಹೂಡಿಕೆಯೊಂದಿಗೆ 63,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿ ಎ ಸಿ ಎಸ್‌) ಗಣಕೀಕರಣವನ್ನು ಪ್ರಾರಂಭಿಸಲಾಗಿದೆ.
-ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸೂಕ್ತ ಸಮಯದಲ್ಲಿ ಮಾರಾಟದ ಮೂಲಕ ಲಾಭದಾಯಕ ಬೆಲೆಗಳನ್ನು ಪಡೆಯಲು ಸಹಾಯ ಮಾಡಲು ಬೃಹತ್ ವಿಕೇಂದ್ರೀಕೃತ ಶೇಖರಣಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.

ಫಾರ್ಮಾಸ್ಯುಟಿಕಲ್ಸ್‌ ಸಂಶೋಧನೆ
ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
ರೂ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ, ಸತತ ಮೂರನೇ ವರ್ಷಕ್ಕೆ ಶೇ.33ರಷ್ಟು ಅಗಾಧ ಹೆಚ್ಚಳ, ಬೆಳವಣಿಗೆಯ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು, ಖಾಸಗಿ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಜಾಗತಿಕ ಕುಸಿತಗಳ ವಿರುದ್ಧ ರಕ್ಷಣೆ ಒದಗಿಸಲು ಕ್ರಮ.

ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ, ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಂತಹ ಬಹು ವಲಯಗಳಲ್ಲಿ ಅಗತ್ಯ ಸರ್ಕಾರಿ ಸೇವೆಗಳ ಸಂಪೂರ್ಣ ಗುರಿ ಸಾಧನೆಗಾಗಿ 500 ಬ್ಲಾಕ್‌ (ತಾಲೂಕು) ಗಳನ್ನು ಒಳಗೊಂಡ ಅಭಿವೃದ್ಧಿ ಆಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅನುಷ್ಠಾನಕ್ಕೆ 15,000 ಕೋಟಿ ರೂ.ಒದಗಿಸಲಾಗುವುದು.

ಬಂದರುಗಳ ಅಭಿವೃದ್ಧಿಗೆ ಕ್ರಮ
ಬಂದರುಗಳು, ಕಲ್ಲಿದ್ದಲು, ಉಕ್ಕು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಕ್ಷೇತ್ರಗಳಿಗೆ ನೂರು ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳು, ಕೊನೆಯ ಮತ್ತು ಮೊದಲ ಮೈಲಿ ಸಂಪರ್ಕಕ್ಕಾಗಿ ಖಾಸಗಿ ಮೂಲಗಳಿಂದ 15,000 ಕೋಟಿ ರೂ. ಸೇರಿದಂತೆ 75,000 ಕೋಟಿ ರೂ.ಹೂಡಿಕೆ.

-ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಲು ಹೊಸ ಮೂಲಸೌಕರ್ಯ ಹಣಕಾಸು ಸಚಿವಾಲಯವನ್ನು ಸ್ಥಾಪಿಸಲಾಗಿದೆ.

-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಶಿಕ್ಷಕರ ತರಬೇತಿಗಾಗಿ ಉತ್ಕೃಷ್ಟತೆಯ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುವುದು.

-ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು ಭೌಗೋಳಿಕ ಪ್ರದೇಶಗಳು, ಭಾಷೆಗಳು, ಪ್ರಕಾರಗಳು ಮತ್ತು ಹಂತಗಳಾದ್ಯಂತ ಗುಣಮಟ್ಟದ ಪುಸ್ತಕಗಳ ಲಭ್ಯತೆ ಮತ್ತು ಸಾಧನಗಳ ಪ್ರವೇಶವನ್ನು ಸುಲಭಗೊಳಿಸಲು ಸ್ಥಾಪಿಸಲಾಗುವುದು.

ಸುಸ್ಥಿರ ಸೂಕ್ಷ್ಮ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವಾಗಿ 5,300 ಕೋಟಿ ರೂ. ನೀಡಲಾಗುವುದು.

ಡಿಜಿಟಲ್ ಎಪಿಗ್ರಫಿ ಮ್ಯೂಸಿಯಂನಲ್ಲಿ ‘ಭಾರತ್ ಶೇರ್ಡ್ ರೆಪೊಸಿಟರಿ ಆಫ್ ಇನ್ಸ್ಕ್ರಿಪ್ಷನ್ಸ್’ ಸ್ಥಾಪಿಸಲಾಗುವುದು, ಮೊದಲ ಹಂತದಲ್ಲಿ ಒಂದು ಲಕ್ಷ ಪ್ರಾಚೀನ ಶಾಸನಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.

– ಕೇಂದ್ರದ ‘ಪರಿಣಾಮಕಾರಿ ಬಂಡವಾಳ ವೆಚ್ಚ’ 13.7 ಲಕ್ಷ ಕೋಟಿ ರೂ. ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪೂರಕ ನೀತಿ ಕ್ರಮಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೂ ಒಂದು ವರ್ಷದವರೆಗೆ ಮುಂದುವರಿಸಲಾಗುವುದು.

-ನಗರ ಯೋಜನೆ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ನಗರಗಳಿಗೆ ಉತ್ತೇಜನ ಮತ್ತು ನಮ್ಮ ನಗರಗಳನ್ನು ‘ನಾಳಿನ ಸುಸ್ಥಿರ ನಗರಗಳಾಗಿ’ ಪರಿವರ್ತಿಸಲು ಕ್ರಮಗಳು.

-ಎಲ್ಲ ನಗರಗಳು ಮತ್ತು ಪಟ್ಟಣಗಳು ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಒಳಚರಂಡಿಗಳ 100 ಪ್ರತಿಶತ ಯಾಂತ್ರೀಕೃತ ಕೊಳಚೆ ತೆಗೆಯುವ ವ್ಯವಸ್ಥೆಯನ್ನು ಕೈಗೊಳ್ಳಲು ಅನುವು ಮಾಡಿಕೊಡುವ ಮೂಲಕ ಮ್ಯಾನ್‌ಹೋಲ್‌ನಿಂದ ಯಂತ್ರೀಕೃತ ಮಾದರಿಗೆ ಪರಿವರ್ತನೆ.

-iGOT ಕರ್ಮಯೋಗಿ, ಸಂಯೋಜಿತ ಆನ್‌ಲೈನ್ ತರಬೇತಿ ವೇದಿಕೆಯಾಗಿದ್ದು, ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಜನಕೇಂದ್ರಿತ ವಿಧಾನವನ್ನು ಸುಗಮಗೊಳಿಸಲು ನಿರಂತರ ಕಲಿಕೆಯ ಅವಕಾಶಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ.

-ವ್ಯವಹಾರವನ್ನು ಸುಲಭಗೊಳಿಸಲು 39,000 ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆಗೊಳಿಸಲಾಗಿದೆ ಮತ್ತು 3,400ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ನಿರಪರಾಧೀಕರಣಗೊಳಿಸಲಾಗಿದೆ.

ಮತ್ತಷ್ಟು ವಿಶ್ವಾಸಾರ್ಹ ಆಡಳಿತಕ್ಕಾಗಿ 42 ಕೇಂದ್ರೀಯ ಕಾಯಿದೆಗಳನ್ನು ತಿದ್ದುಪಡಿ ಮಾಡಲು ಜನ ವಿಶ್ವಾಸ್ ಮಸೂದೆಯನ್ನು ಮಂಡಿಸಲಾಗಿದೆ.

ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ
-ಮೇಕ್ ಎಐ ಇನ್ ಇಂಡಿಯಾ ಮತ್ತು ಮೇಕ್ ಎಐ ವರ್ಕ್ ಫಾರ್ ಇಂಡಿಯಾ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ನ ಮೂರು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಸ್ಟಾರ್ಟ್-ಅಪ್‌ಗಳು ಮತ್ತು ಶಿಕ್ಷಣ ಕ್ಷೇತ್ರದಿಂದ ನಾವೀನ್ಯ ಮತ್ತು ಸಂಶೋಧನೆಯನ್ನು ಅನಾವರಣಗೊಳಿಸಲು ರಾಷ್ಟ್ರೀಯ ಡೇಟಾ ಆಡಳಿತ ನೀತಿಯನ್ನು ಹೊರತರಲಾಗುವುದು.

ಎಲ್ಲಾ ಡಿಜಿಟಲ್‌ ವ್ಯವಸ್ಥೆಗಳಿಗೆ ಪಾನ್‌ ಗುರುತು
ಡಿಜಿಲಾಕರ್ ಸೇವೆ ಮತ್ತು ಆಧಾರ್ ಅನ್ನು ಮೂಲ ಗುರುತಾಗಿ ಬಳಸಿಕೊಂಡು ವ್ಯಕ್ತಿಗಳ ಗುರುತು ಮತ್ತು ವಿಳಾಸದ ಸಮನ್ವಯ ಮತ್ತು ನವೀಕರಣಕ್ಕಾಗಿ ಒಂದೇ ತಾಣದಲ್ಲಿ ಪರಿಹಾರ ದೊರೆಯುವ ಘಟಕ ಸ್ಥಾಪಿಸಲಾಗುವುದು.
ವ್ಯವಹಾರವನ್ನು ಸುಲಭಗೊಳಿಸಲು ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಾಗಿ PAN ಅನ್ನು ಬಳಸಲಾಗುತ್ತದೆ.

ಜಲಜನಕ ಮಿಷನ್‌
ಆರ್ಥಿಕತೆಯಲ್ಲಿ ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಪಳೆಯುಳಿಕೆ ಇಂಧನ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಸಿರು ಜಲಜನಕ ಮಿಷನ್ ಅಡಿಯಲ್ಲಿ 2030 ರ ವೇಳೆಗೆ ವಾರ್ಷಿಕ 5 ಎಂಎಂಟಿ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಲಾಗುವುದು.

-ನವೀಕರಿಸಬಹುದಾದ ಇಂಧನ ಗ್ರಿಡ್ ಏಕೀಕರಣ ಮತ್ತು ಲಡಾಖ್‌ನಿಂದ ವಿದ್ಯುತ್‌ ಸಾಗಣೆಗಾಗಿ 20,700 ಕೋಟಿ ರೂ. ವೆಚ್ಚವನ್ನು ಒದಗಿಸಲಾಗಿದೆ.

ಪರ್ಯಾಯ ರಸಗೊಬ್ಬರಗಳಿಗಾಗಿ ಪಿಎಂ ಪ್ರಣಾಮ್‌
ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು “ಪ್ರಧಾನ ಮಂತ್ರಿಯವರ ಭೂಮಿಯ ಪುನಃಸ್ಥಾಪನೆ, ಜಾಗೃತಿ, ಪೋಷಣೆ ಮತ್ತು ಸುಧಾರಣೆ ಕಾರ್ಯಕ್ರಮ” (ಪಿಎಂ ಪ್ರಣಾಮ್) ಅನ್ನು ಪ್ರಾರಂಭಿಸಲಾಗುವುದು.
-ಮನರೇಗಾ, ಕಾಂಪಾ ನಿಧಿ ಮತ್ತು ಇತರ ಮೂಲಗಳ ನಡುವಿನ ಸಮನ್ವಯದ ಮೂಲಕ ಕರಾವಳಿಯುದ್ದಕ್ಕೂ ಮತ್ತು ಉಪ್ಪು ಉತ್ಪಾದನೆಯ ಭೂಮಿಯಲ್ಲಿ ಕಾಂಡ್ಲಾ ನೆಡುತೋಪು ನಿರ್ಮಾಣಕ್ಕೆ ಮಿಶ್ಟಿ (MISHTI), ‘ದಡದ ಆವಾಸ ಸ್ಥಾನಗಳು ಮತ್ತು ಸ್ಪಷ್ಟವಾದ ಆದಾಯಕ್ಕಾಗಿ ಮ್ಯಾಂಗ್ರೋವ್ ಇನಿಶಿಯೇಟಿವ್’ ಎಂಬ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ.
-ಪರಿಸರ (ಸಂರಕ್ಷಣೆ) ಕಾಯಿದೆಯಡಿಯಲ್ಲಿ ಹಸಿರು ಕ್ರೆಡಿಟ್ ಕಾರ್ಯಕ್ರಮವನ್ನು ಪರಿಸರಕ್ಕೆ ಸುಸ್ಥಿರವಾದ ಮತ್ತು ಸ್ಪಂದಿಸುವ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಮತ್ತು ಹೆಚ್ಚುವರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಪ್ರಕಟಿಸಲಾಗುವುದು.

ಅಮೃತ್‌ ಧರೋಹರ್‌
ಜೌಗು ಪ್ರದೇಶಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸಲು, ಜೈವಿಕ ವೈವಿಧ್ಯವನ್ನು ಹೆಚ್ಚಿಸಲು, ಇಂಗಾಲದ ಸಂಗ್ರಹ, ಪರಿಸರ ಪ್ರವಾಸೋದ್ಯಮ ಅವಕಾಶಗಳನ್ನು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯವನ್ನು ಹೆಚ್ಚಿಸಲು ಅಮೃತ್ ಧರೋಹರ್ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೆ ತರಲಾಗುವುದು.

– ಬೇಡಿಕೆ-ಆಧಾರಿತ ಔಪಚಾರಿಕ ಕೌಶಲ್ಯವನ್ನು ಸಕ್ರಿಯಗೊಳಿಸಲು, ಎಂಎಸ್‌ಎಂಇಗಳು ಸೇರಿದಂತೆ ಉದ್ಯೋಗದಾತರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಉದ್ಯಮಶೀಲತಾ ಯೋಜನೆಗಳಿಗೆ ಪ್ರವೇಶವನ್ನು ಸುಲಭಗೊಳಿಸಲು ಏಕೀಕೃತ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಗುವುದು.

೪೭ ಲಕ್ಷ ಯುವಕರಿಗೆ ಅಪ್ರೆಂಟಿಸ್‌ಷಿಪ್‌
ಮೂರು ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಒದಗಿಸಲು ಭಾರತದಾದ್ಯಂತ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನಾ ಯೋಜನೆ ಅಡಿಯಲ್ಲಿ ನೇರ ಲಾಭ ವರ್ಗಾವಣೆಯನ್ನು ಆರಂಭಿಸಲಾಗುವುದು.

Exit mobile version