ನವ ದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2023ರ ಸಾಲಿನ ಬಜೆಟ್ ಮಂಡಿಸಿದರು. ಈ ಸಂದರ್ಭದಲ್ಲಿ ಅವರು ಗಾಢ ಕೆಂಪು ರಂಗಿನ, ಟೆಂಪಲ್ ಬಾರ್ಡರ್ ಸೀರೆಯನ್ನು ಉಟ್ಟು ಬಂದುದು ವಿಶೇಷವಾಗಿತ್ತು.
ನಿರ್ಮಲಾ ಅವರು ಯಾವಾಗಲೂ ಸರಳವಾದ ಸೀರೆಯನ್ನು ಉಡುತ್ತಾರೆ. ಆದೆ ಬಜೆಟ್ ಸಂದರ್ಭದಲ್ಲಿ ಅವರು ಉಡುವ ಸೀರೆಗಳ ಆಯ್ಕೆ ವಿಶೇಷವಾಗಿರುವುದನ್ನು ಗಮನಿಸಲಾಗಿದೆ. ಇದರಲ್ಲಿ ಆಯಾ ವರ್ಷದ ಬಜೆಟ್ ಬಗ್ಗೆ ಏನಾದರೂ ಸೂಚನೆಗಳು ಇವೆಯೇ ಎಂಬ ಅಂಶವನ್ನೂ ತಜ್ಞರು ಅನೇಕ ಸಲ ವಿಶ್ಲೇಷಿಸಿದ್ದಾರೆ.
ಕೈಮಗ್ಗದ ಸೀರೆಗಳ ಬಗ್ಗೆ ನಿರ್ಮಲಾ ಅವರ ಪ್ರೀತಿ ಎಲ್ಲರಿಗೂ ಗೊತ್ತಿರುವುದೇ. ಸಾಮಾನ್ಯವಾಗಿ ಬಜೆಟ್ ಸಂದರ್ಭದಲ್ಲಿ ಅವರು ಗಾಢ ರಂಗಿನ ಸೀರೆಗಳನ್ನು ಉಡುತ್ತಾರೆ. ಹಾಗೆಯೇ ಈ ಬಾರಿ ಕೆಂಪು ಬಣ್ಣವನ್ನು ಆಯ್ದುಕೊಂಡಿದ್ದಾರೆ. ಸಾಂಪ್ರದಾಯಿಕ ಕೈಮಗ್ಗದ ಈ ಸೀರೆಯಲ್ಲಿ ದೇವಾಲಯ ಗೋಪುರದ ಅಂಚು ಕಂಡುಬಂದಿದೆ. ಈ ವರ್ಷದ ಆರ್ಥಿಕ ಪರಿಸ್ಥಿತಿ ಭರವಸೆದಾಯಕವಾಗಿದೆ ಎಂಬುದನ್ನು ಅವರು ಈ ಮೂಲಕ ಸೂಚಿಸಿದ್ದಾರೆ ಎಂದು ಭಾವಿಸಲಾಗಿದೆ.
ಕಳೆದ ಸಾಲಿನಲ್ಲಿ (2022) ಮರೂನ್ ಬಣ್ಣದ ಕೈಮಗ್ಗದ ಸೀರೆಯನ್ನು ಉಟ್ಟಿದ್ದರು. 2021ರ ಬಜೆಟ್ ಸಂದರ್ಭದಲ್ಲಿ ಅವರು ಕೆಂಪು ಹಾಗೂ ಬಿಳಿ ಬಣ್ಣದ, ಇಕ್ಕತ್ ವಿನ್ಯಾಸ ಹೊಂದಿರುವ ಪೋಚಂಪಲ್ಲಿ ಸೀರೆಯನ್ನು ಉಟ್ಟಿದ್ದರು. 2020ರಲ್ಲಿ ನೀಲಿ ಬಾರ್ಡರ್ ಹೊಂದಿದ್ದ ಹಳದಿ ಬಣ್ಣದ ಸೀರೆ ಅವರ ಆಯ್ಕೆಯಾಗಿತ್ತು. ಈ ಅಧಿಕಾರಾವಧಿಯ ಮೊದಲ ಬಜೆಟ್ (2019)ನಲ್ಲಿ ಅವರು ಗೋಲ್ಡನ್ ಬಾರ್ಡರ್ ಹೊಂದಿದ್ದ ಮಂಗಳಗಿರಿ ಸಿಲ್ಕ್ ಸೀರೆಯನ್ನು ಧರಿಸಿದ್ದರು.
ಕೈಮಗ್ಗದ ಸೀರೆಗಳ ಜತೆಗೆ ʼವೋಕಲ್ ಫಾರ್ ಲೋಕಲ್ʼಗೂ ಅವರು ಪ್ರಸಿದ್ಧರಾಗಿದ್ದಾರೆ. 2019ರಲ್ಲಿ ಅವರು ಬ್ರೀಫ್‌ಕೇಸ್ ತೊರೆದು ಬಹಿ ಖಾತಾ ಹಿಡಿದಿದ್ದರು. ನಂತರದ ವರ್ಷಗಳಲ್ಲಿ ಡಿಜಿಟಲ್ ಸಾಧನದ ಮೂಲಕ ಬಜೆಟ್ ಓದುತ್ತಿದ್ದಾರೆ.
ಇದನ್ನೂ ಓದಿ: Union budget 2023 : ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5200 ಕೋಟಿ ರೂ.