ಬೆಂಗಳೂರು: ಸ್ಟಾರ್ಟ್ಅಪ್ ಗಳಿಗೆ ಉತ್ತೇಜನ ನೀಡಲು ಹಾಗೂ ಹೂಡಿಕೆಗೆ ಬೆಂಂಬಲಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಬಜೆಟ್ನಲ್ಲಿ (Union Budget 2024) ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಲಾಗಿದೆ. “ಸ್ಟಾರ್ಟ್ಅಪ್ಗಳಲ್ಲಿನ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸರ್ಕಾರ ಏಂಜೆಲ್ ತೆರಿಗೆ ರದ್ದುಗೊಳಿಸುತ್ತದೆ” ಎಂದು ಹಣಕಾಸು ಸಚಿವರು ಬಜೆಟ್ ಮಂಡನೆ ವೇಳೆ ಹೇಳಿದರು. ಈ ಮೂಲಕ ಹೊಸ ಉದ್ದಿಮೆಗಳನ್ನು ಬೆಂಬಲಿಸಲು ಸರ್ಕಾರ ಬದ್ಧ ಎಂದರು.
ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಪಿಂಚಣಿ ನಿಧಿಗಳ ಬೆಂಬಲಿತ ಸ್ಟಾರ್ಟ್ಅಪ್ಗಳು ಮತ್ತು ಹೂಡಿಕೆಗಳಿಗೆ ನೀಡಲಾಗಿದ್ದ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮವು ತೆರಿಗೆ ಪರಿಹಾರ ಪಡೆಯುವ ಉದ್ದೇಶವನ್ನು ಹೊಂದಿತ್ತು.
ಆದಾಯ ತೆರಿಗೆ ಕಾಯ್ದೆಯಡಿ (ಐಟಿಎ) ಸೆಕ್ಷನ್ 56 (2) (VIB) ಏಂಜೆಲ್ ತೆರಿಗೆಯನ್ನು 2012 ರಲ್ಲಿ ಪರಿಚಯಿಸಲಾಗಿತ್ತು. ಇದು ಷೇರುಗಳ ವಿತರಣೆಯ ಮೂಲಕ ಪಟ್ಟಿ ಮಾಡದ ಕಂಪನಿಗಳು ಮಾಡಿದ ಹೂಡಿಕೆಗಳನ್ನು ಗುರಿಯಾಗಿಸಿಕೊಂಡಿದ್ದವು. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು “ಇತರ ಮೂಲಗಳಿಂದ ಬರುವ ಆದಾಯ” ಎಂದು ವರ್ಗೀಕರಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿತ್ತು. (ಉದಾಹರಣೆಗೆ, ಒಂದು ಕಂಪನಿಯ ಮೌಲ್ಯ 1 ಕೋಟಿ ಇದ್ದು, ಕಂಪನಿಯ ಮೇಲಿನ ಒಟ್ಟು ಹೂಡಿಕೆ 1.5 ಕೋಟಿ ರೂಪಾಯಿ ಇದ್ದರೆ ಹೆಚ್ಚುವರಿ 50 ಲಕ್ಷಕ್ಕೆ ತೆರಿಗೆ ಹಾಕಲಾಗುತ್ತಿತ್ತು. ಇದನ್ನು ಏಂಜಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತಿತ್ತು.
ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ‘ಚೊಂಬು’ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್
ಅಕ್ರಮ ಹಣ ವರ್ಗಾವಣೆ ಮತ್ತು ಲೆಕ್ಕವಿಲ್ಲದ ಹಣದ ಹರಿವಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು 2012 ರ ಹಣಕಾಸು ಕಾಯ್ದೆಯಗೆ ಸೇರಿಸಲಾಗಿತ್ತು. ಆದಾಗ್ಯೂ, ಇದು ಸ್ಟಾರ್ಟ್ಅಪ್ಗಳು ಮತ್ತು ಹೂಡಿಕೆದಾರರೊಳಗೆ ವಿವಾದಕ್ಕೆ ಕಾರಣವಾಯಿತು. ನಿಧಿಸಂಗ್ರಹಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಅಪಸ್ವರಕ್ಕೆ ಕಾರಣವಾಯಿತು.
ಆರ್ಥಿಕ ಪಂಡಿತರ ಪ್ರಕಾರ ಪ್ರಕಾರ, ಈ ತೆರಿಗೆ ತೆಗೆದುಹಾಕುವುದು ಸ್ಪಷ್ಟತೆ ಒದಗಿಸುವ ಮತ್ತು ವಿದೇಶಿ ಹೂಡಿಕೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುವ ಮಹತ್ವದ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಏಂಜೆಲ್ ತೆರಿಗೆಯನ್ನು ರದ್ದುಪಡಿಸುವುದು ಸ್ಟಾರ್ಟ್ಅಪ್ ಸಮುದಾಯಕ್ಕೆ ಸಕಾರಾತ್ಮಕ ಬೆಳವಣಿಗೆ. ಇದು ನಿಧಿಸಂಗ್ರಹಕ್ಕೆ ಹೆಚ್ಚು ಬೆಂಬಲ ಮತ್ತು ಕಡಿಮೆ ನಿರ್ಬಂಧಿತ ವಾತಾವರಣ ನಿವಾರಿಸುತ್ತದೆ. ಈ ಬದಲಾವಣೆಯೊಂದಿಗೆ, ಭಾರತದಲ್ಲಿ ನಾವೀನ್ಯತೆ ಮತ್ತು ಹೂಡಿಕೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.