ನವದೆಹಲಿ: ದೇಶದ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರವು ರಕ್ಷಾ ಬಂಧನದ ಉಡುಗೊರೆ ನೀಡಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿದೆ. ಇದರಿಂದ ಕೋಟ್ಯಂತರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಭಾರಿ ಅನುಕೂಲವಾಗಲಿದೆ. ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಖರೀದಿಸುವವರಿಗೆ ಈಗಾಗಲೇ 200 ರೂ. ಸಬ್ಸಿಡಿ ನೀಡಲಾಗುತ್ತದೆ. ಇದರ ಜತೆಗೆ 200 ರೂ. ಕಡಿಮೆ ಮಾಡಿರುವುದರಿಂದ ಅವರಿಗೆ 700 ರೂ.ಗೆ ಅಡುಗೆ ಅನಿಲ ಸಿಲಿಂಡರ್ ದೊರೆತಂತಾಗಲಿದೆ.
ದೇಶಾದ್ಯಂತ ಈಗ 14 ಕೆ.ಜಿಯ ಒಂದು ಸಿಲಿಂಡರ್ ಬೆಲೆ 1,100 ರೂಪಾಯಿ ಇದೆ. ಇದು ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬ ಹೊರೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 200 ರೂ. ಇಳಿಕೆ ಮಾಡಿರುವುದು ಕೋಟ್ಯಂತರ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ರಕ್ಷಾಬಂಧನ ಹಾಗೂ ಓಣಂ ಹಬ್ಬದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಲು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಲೋಕಸಭೆ ಚುನಾವಣೆಗೆ ರಣತಂತ್ರ?
ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಲೆಯೇರಿಕೆಯು ಪ್ರಮುಖ ವಿಷಯವಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಸಿಲಿಂಡರ್ ಬೆಲೆ ಇಳಿಕೆ ಮಾಡಿದ್ದಾರೆ. ಕಾಂಗ್ರೆಸ್ ಉಚಿತ ಕೊಡುಗೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: Union Cabinet: ರೈತರಿಗೆ ಮೋದಿ ಬಂಪರ್; ಕ್ವಿಂಟಾಲ್ ಕಬ್ಬಿಗೆ 315 ರೂ., ಯೂರಿಯಾಗೆ 3.68 ಲಕ್ಷ ಕೋಟಿ ರೂ. ಸಬ್ಸಿಡಿ
ಪೆಟ್ರೋಲ್ ಬೆಲೆಯೂ ಇಳಿಕೆ?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಜತೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನೂ ಕಡಿಮೆ ಮಾಡಲಿದೆ ಎನ್ನಲಾಗುತ್ತಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿದುಬಂದಿದೆ.