ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ, ಆರಂಭಿಕ ಹಂತದಲ್ಲಿ 19,744 ಕೋಟಿ ರೂ. ವ್ಯಯಿಸುವ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಗೆ (Green Hydrogen Mission) ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಸಮ್ಮತಿ ಸೂಚಿಸಿದೆ.
ದೇಶದ ಇಂಧನ ಬೇಡಿಕೆ ಪೂರೈಸುವ ದೃಷ್ಟಿಯಲ್ಲಿ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಅನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ನರೇಂದ್ರ ಮೋದಿ ಅವರು 2021ರ ಸ್ವಾತಂತ್ರ್ಯ ದಿನದ ಭಾಷಣದ ವೇಳೆಯೇ ಮಿಷನ್‌ಅನ್ನು ಘೋಷಿಸಿದ್ದರು.
ಕೇಂದ್ರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಮಿಷನ್ ಕುರಿತು ಮಾಹಿತಿ ನೀಡಿದರು. “ದೇಶದಲ್ಲಿ 2030ರ ವೇಳೆಗೆ ವಾರ್ಷಿಕ 50 ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಮಾಡುವ ಗುರಿಯೊಂದಿಗೆ ಮಿಷನ್‌ಅನ್ನು ಘೋಷಿಸಲಾಗಿದೆ” ಎಂದರು.
ಆರು ಲಕ್ಷ ಉದ್ಯೋಗ ಸೃಷ್ಟಿ
“ಗ್ರೀನ್ ಹೈಡ್ರೋಜನ್ ಮಿಷನ್‌ಗೆ 8 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಪಳೆಯುಳಿಕೆ ಇಂಧನದ ಆಮದು ಪ್ರಮಾಣ ಒಂದು ಲಕ್ಷ ಕೋಟಿ ರೂಪಾಯಿಂತ ಹೆಚ್ಚು ಕಡಿತವಾಗಲಿದೆ. ಹಾಗೆಯೇ, ಹಸಿರುಮನೆ ಅನಿಲ ಸೋರಿಕೆಯು ವಾರ್ಷಿಕ 50 ದಶಲಕ್ಷ ಮೆಟ್ರಿಕ್ ಟನ್ ಇಳಿಕೆಯಾಗಲಿದೆ” ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಏನಿದು ಗ್ರೀನ್ ಹೈಡ್ರೋಜನ್?
ಗ್ರೀನ್ ಹೈಡ್ರೋಜನ್ ಎಂಬುದು ಪರ್ಯಾಯ ಇಂಧನವಾಗಿದೆ. ಇದನ್ನು ನವೀಕರಿಸಬಹುದಾದ ಇಂಧನದ ಮೂಲಗಳಿಂದ ಉತ್ಪಾದಿಸಲಾಗುತ್ತದೆ. ವಿದ್ಯುತ್ ಬಳಕೆ ಮೂಲಕ ನೀರಿನಿಂದ ಆಮ್ಲಜನಕವನ್ನು ಬೇರ್ಪಡಿಸಿ ಗ್ರೀನ್ ಹೈಡ್ರೋಜನ್‌ಅನ್ನು ಪಡೆಯಲಾಗುತ್ತದೆ. ಇದನ್ನು ಗ್ಯಾಸ್ ಹಾಗೂ ನೈಸರ್ಗಿಕ ಅನಿಲ ಪೈಪ್‌ಲೈನ್ ಮೂಲಕ ಪೂರೈಕೆ ಮಾಡಬಹುದಾಗಿದೆ. ಉತ್ಪಾದನೆ, ಆಹಾರ ಸಂಸ್ಕರಣೆ, ಸಾಗಣೆಗೆ ಇದನ್ನು ಬಳಸಬಹುದಾಗಿದೆ.
ಗೋವಾ ಏರ್‌ಪೋರ್ಟ್‌ಗೆ ಪರಿಕ್ಕರ್ ಹೆಸರು
ಗೋವಾದ ಮೋಪಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಹೆಸರಿಡಲು ಕೂಡ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಇನ್ನು ಮುಂದೆ ಇದು ಮನೋಹರ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಆಗಲಿದೆ.
ಇದನ್ನೂ ಓದಿ | India Energy Week 2023 | ನಾವೀನ್ಯಕಾರರಿಗೆ ಇಂಧನ ಸಪ್ತಾಹದಿಂದ ಅಭೂತಪೂರ್ವ ಅವಕಾಶ: ಹರ್ದೀಪ್ ಎಸ್ ಪುರಿ