ನವದೆಹಲಿ: ಸಶಸ್ತ್ರ ಪಡೆಗಳ ನಿವೃತ್ತ ಯೋಧರಿಗೆ ಪಿಂಚಣಿ ನೀಡುವ ‘ಒಂದು ಶ್ರೇಣಿ, ಒಂದು ಪಿಂಚಣಿ’ (Revision Of OROP) ವ್ಯವಸ್ಥೆಯ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಇದರಿಂದ ಲಕ್ಷಾಂತರ ಯೋಧರಿಗೆ ಹೆಚ್ಚಿನ ಪಿಂಚಣಿ ಸಿಗಲಿದ್ದು, ಐತಿಹಾಸಿಕ ತೀರ್ಮಾನ ಎನಿಸಿದೆ.
“ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ ಅಡಿಯಲ್ಲಿ ನಿವೃತ್ತ ಯೋಧರು ಹಾಗೂ ಹುತಾತ್ಮರು ಅಥವಾ ನಿಧನ ಹೊಂದಿದ ಯೋಧರ ಪತ್ನಿಯರಿಗೆ ನೀಡುವ ಪಿಂಚಣಿಯನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದ 25.13 ಲಕ್ಷ ಜನರಿಗೆ ಅನುಕೂಲವಾಗಲಿದೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ 2015ರಲ್ಲಿ ಒಆರ್‌ಒಪಿ ಜಾರಿಗೆ ತಂದಿದೆ.
ಪರಿಷ್ಕೃತ ಪಿಂಚಣಿಯು 2019ರ ಜುಲೈನಿಂದ 2022ರ ಜೂನ್‌ವರೆಗಿನ ಬಾಕಿಯನ್ನೂ (Arrears) ಒಳಗೊಂಡಿದೆ. ಹಾಗಾಗಿ, ನಿವೃತ್ತ ಯೋಧರು ಹಾಗೂ ಕುಟುಂಬ ಪಿಂಚಣಿದಾರರಿಗೆ ಇದು ಸಿಹಿ ಸುದ್ದಿಯಾಗಿದೆ. ಬಾಕಿ ಸೇರಿ ಪಿಂಚಣಿ ನೀಡಲು ಕೇಂದ್ರ ಸರ್ಕಾರವು 23,638 ಕೋಟಿ ರೂ. ವ್ಯಯಿಸಲಿದೆ. ಯೋಜನೆಯ ಪರಿಷ್ಕರಣೆಯಿಂದ ವಾರ್ಷಿಕ 8,450 ಕೋಟಿ ರೂ. ಖರ್ಚಾಗಲಿದೆ.
ಇದನ್ನೂ ಓದಿ | EPFO Pensioners | ಇಪಿಎಫ್‌ಒ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಗಡುವಿನಲ್ಲಿ ವಿನಾಯಿತಿ