ನವ ದೆಹಲಿ: ಅಗ್ನಿಪಥ್ (Agnipath) ಸೇನಾ ನೇಮಕಾತಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥಸಿಂಗ್ ಮೂರು ಸೇನಾಪಡೆಯ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ವಾಯುಪಡೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ, ಭೂಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಗಂಭೀರವಾಗಿ ಚರ್ಚಿಸಿ, ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಈ ಯೋಜನೆಯನ್ನು ಏಕಾಏಕಿ ಜಾರಿಗೆ ತರಲಾಗಿಲ್ಲ. ೧೯೮೯ರಿಂದಲೂ ಈ ಯೋಜನೆಯ ಜಾರಿ ಕುರಿತು ಅಧ್ಯಯನ ನಡೆಸಲಾಗುತ್ತಿತ್ತು. ಬೇರ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳ ಪರಿಣಾಮವನ್ನು ಪರಿಶೀಲಿಸಿಯೇ ಈ ಯೋಜನೆ ಘೋಷಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಯೋಜನೆ ಹಿಂದಕ್ಕೆ ಪಡೆಯುವುದಿಲ್ಲ
ಈ ನೇಮಕಾತಿ ಯೋಜನೆ ಜಾರಿಯ ಕುರಿತು ಸೇನೆ ಅಂತಿಮ ತೀರ್ಮಾನ ತೆಗೆದುಕೊಂಡಾಗಿದೆ. ಮತ್ತೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈ ಸೇನಾ ಮುಖ್ಯಸ್ಥರ ಸಭೆಯ ನಂತರ ರಕ್ಷಣಾ ಇಲಾಖೆಯು ಹೆಚ್ಚುವರಿ ಕಾರ್ಯದರ್ಶಿ ಲೆ.ಜನರಲ್ ಅನಿಲ್ ಪುರಿ ಮಾಹಿತಿ ನೀಡಿದ್ದಾರೆ.
ಸೇನೆಗೆ ತರುಣರನ್ನು ನೇಮಕ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇದನ್ನು ಮುಂದುವರಿಸಬೇಕೇ ವಿನಃ ಹಿಂಪಡೆಯುವುದಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ವಯಸ್ಕ ಯೋಧರ ಸಾವಿನ ಪ್ರಮಾಣವನ್ನು ನೋಡಿದರೆ ನಿಮಗೆ ಈ ಯೋಜನೆಯ ಅನಿವಾರ್ಯತೆ ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸೇನೆಯಿಂದ ಹೊರ ಬೀಳುವ ಅಗ್ನಿವೀರರಿಗೆ ಅರೆಸೇನಾ ಪಡೆ, ರಕ್ಷಣಾ ಇಲಾಖೆಯ ಹುದ್ದೆಗಳಲ್ಲಿ ಮೀಸಲು ನೀಡುವ ಕುರಿತು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಪ್ರತಿಭಟನೆ ತೀವ್ರಗೊಂಡ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಲ್ಲ ಎಂದು ಲೆ.ಜನರಲ್ ಅನಿಲ್ ಪುರಿ ಸ್ಪಷ್ಟಪಡಿಸಿದ್ದಾರೆ.
ಪ್ರತಿ ವರ್ಷ ಸುಮಾರು ೧೭, ೬೦೦ ಮಂದಿ ಕಾಯಂ ಯೋಧರು ಸೇವೆಯಿಂದ ಹೊರಬರುತ್ತಿದ್ದಾರೆ. ಏಕೆ ಎಂದು ಅವರನ್ನು ಯಾರೂ ಪ್ರಶ್ನಿಸುತ್ತಿಲ್ಲ. ಈ ಸಂಖ್ಯೆ ಹೆಚ್ಚುತ್ತಿರುವುದರಿಂದಲೇ ನಾಲ್ಕು ವರ್ಷಗಳಿಗೆ ಸೇನೆಯಿಂದ ಹೊರ ಬರಲು ಅವಕಾಶ ನೀಡುವ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಈ ವರ್ಷ ೪೬ಸಾವಿರ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಿಸಲಾಗಿದ್ದರೂ ಮುಂದೆ ಈ ಸಂಖ್ಯೆ ೧.೨೫ ಲಕ್ಷಕ್ಕೆ ಏರಲಿದೆ ಎಂದಿರುವ ರಕ್ಷಣಾ ಇಲಾಖೆಯು ಹೆಚ್ಚುವರಿ ಕಾರ್ಯದರ್ಶಿ ಲೆ.ಜನರಲ್ ಅನಿಲ್ ಪುರಿ, ಮುಂದಿನ ನಾಲ್ಕೈದು ವರ್ಷಗಳಲ್ಲಿ ೫೦-೬೦ ಸಾವಿರ ಸೈನಿಕರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ಭಾರತೀಯ ಸೇನೆಗಿದೆ. ಮುಂದೆ ಈ ಸಂಖ್ಯೆ ಒಂದು ಲಕ್ಷದ ಗಡಿ ದಾಟಲಿದೆ. ತರಬೇತಿ ಸೇರಿದಂತೆ ನೇಮಕ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡ ನಂತರ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ ಎಂದು ವಿವರಿಸಿದ್ದಾರೆ
ಜೂ.೨೪ ರಿಂದಲೇ ನೇಮಕಾತಿ ಶುರು
ಜೂನ್ ೨೪ರಿಂದಲೇ ಅಗ್ನಿವೀರರ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಜುಲೈ ೨೪ರಂದು ಮೊದಲ ಹಂತದ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಡಿಸೆಂಬರ್ ವೇಳೆಗೆ ಈ ಬ್ಯಾಚ್‌ನ ನೇಮಕ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಡಿಸೆಂಬರ್ ೩೦ರಿಂದಲೇ ತರಬೇತಿ ಆರಂಭವಾಗಲಿದೆ ಎಂದು ಏರ್ ಮಾರ್ಷಲ್ ಎಸ್ ಕೆ ಝಾ ತಿಳಿಸಿದ್ದಾರೆ.
ಬರುವ ಡಿಸೆಂಬರ್‌ನಲ್ಲಿ ೨೫ ಸಾವಿರ ಅಗ್ನಿವೀರರನ್ನು ಸೇನೆಗೆ ಸೇರಿಸಿಕೊಳ್ಳಲಾಗುವುದು. ೨೦೨೩ರ ಫೆಬ್ರವರಿ ಹೊತ್ತಿಗೆ ಮತ್ತೆ ೪೦ ಅಗ್ನಿವೀರರ ನೇಮಕ ಅಂತಿಮಗೊಳ್ಳಲಿದೆ. ನೌಕಾಪಡೆಗೆ ನೇಮಕಗೊಳ್ಳಲಿರುವ ಅಗ್ನಿವೀರರಿಗೆ ಬರುವ ನವೆಂಬರ್ ೨೧ರಿಂದಲೇ ತರಬೇತಿ ಆರಂಭಗೊಳ್ಳಲಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ | ಅಗ್ನಿಪಥ್ ಯೋಜನೆ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿದ ವಿವರದಲ್ಲಿ ಏನೇನಿದೆ?