ಹೊಸದಿಲ್ಲಿ: ಕೋವಿಡ್-19 (covid-19 virus, corona virus) ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ (Health minister) ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಇಂದು ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಇತರ ಹಿರಿಯ ಅಧಿಕಾರಿಗಳ ಜತೆಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಕೋವುಡ್ ಹೊಸ ರೂಪಾಂತರಿ ಪ್ರಕರಣಗಳ ಪತ್ತೆ ಹಾಗೂ ಚೀನಾ ಮೂಲದ ಉಸಿರಾಟ ಸಂಬಂಧಿ ಕಾಯಿಲೆ ನ್ಯುಮೋನಿಯಾದ ಹೆಚ್ಚಳದ ಬಗ್ಗೆ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ. ರಾಜ್ಯ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕೇಂದ್ರ ಆರೋಗ್ಯ ಸಚಿವರು ಎಲ್ಲ ರಾಜ್ಯಗಳ ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಕುರಿತು ಮತ್ತು ಇನ್ಫ್ಲುಯೆಂಜಾದಂತಹ ಉಸಿರಾಟದ ಕಾಯಿಲೆಯ ಇತ್ತೀಚಿನ ಏರಿಕೆಯ ನಿರ್ವಹಣೆಯ ಕುರಿತು ಸಮಾಲೋಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಹೊಸ JN.1 ರೂಪಾಂತರಿಯ ಕೆಲವು ಪ್ರಕರಣ ಪತ್ತೆಯಾಗಿವೆ. ಕೋವಿಡ್- 19 ಪ್ರಕರಣಗಳಲ್ಲಿ ಇತ್ತೀಚಿನ ಏರಿಕೆಯನ್ನು ಗಮನಿಸಿ ಭಾರತದಲ್ಲಿನ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಅವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕೋವಿಡ್ ಕುರಿತ ನಿರಂತರ ಜಾಗರೂಕತೆಯ ಸ್ಥಿತಿಯನ್ನು ನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
“ಮುಂಬರುವ ಹಬ್ಬದ ಋತುವನ್ನು ಪರಿಗಣಿಸಿ, ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಸನ್ನದ್ಧವಾಗಿ ಇರಿಸಿಕೊಳ್ಳಲು, ಎಚ್ಚರಿಕೆಯ ಮೂಲಕ ರೋಗದ ಹರಡುವಿಕೆಯ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. COVID-19 ನಿರ್ವಹಣೆಯ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ.
ಇದನ್ನೂ ಓದಿ: Covid 19: ಜೆಎನ್.1 ಕೋವಿಡ್‌ನ ಜಾಗೃತೆ ವಹಿಸಬೇಕಾದ ರೂಪಾಂತರ! ವಿಶ್ವ ಸಂಸ್ಥೆ ಘೋಷಣೆ