Site icon Vistara News

Viral Video | ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಹರ್ಯಾಣ ಗೃಹ ಸಚಿವರನ್ನು ಮುಜುಗರಕ್ಕೀಡು ಮಾಡಿದ ಗೃಹ ಸಚಿವ ಅಮಿತ್​ ಶಾ

Home Ministers In Haryana

ನವದೆಹಲಿ: ಹರ್ಯಾಣ ಗೃಹ ಸಚಿವ ಅನಿಲ್​ ವಿಜ್​ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಂದಾಗಿ ಮುಜುಗರಕ್ಕೀಡಾಗಬೇಕಾಯಿತು. ಹರ್ಯಾಣದ ಸೂರಜ್​ಕುಂಡ್​​ನಲ್ಲಿ ನಡೆದ ಚಿಂತನ ಶಿಬಿರದಲ್ಲಿ ದೀರ್ಘ ಭಾಷಣ ಮಾಡುತ್ತಿದ್ದ ಅವರಿಗೆ ಅಮಿತ್​ ಶಾ ನಾಲ್ಕು ಬಾರಿ ಅಡ್ಡಿಪಡಿಸಿ ‘ಭಾಷಣ ನಿಲ್ಲಿಸಿ’ ಎಂದು ಹೇಳಿದ್ದೇ ಈ ಮುಜುಗರಕ್ಕೆ ಕಾರಣ. ಎರಡು ದಿನಗಳ ಕಾಲ ನಡೆಯಲಿರುವ ಚಿಂತನ ಶಿಬಿರದಲ್ಲಿ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಉಪಮುಖ್ಯಮಂತ್ರಿಗಳೆಲ್ಲ ಪಾಲ್ಗೊಂಡಿದ್ದರು. ಗೃಹ ಸಚಿವ ಅಮಿತ್​ ಶಾ ಅಧ್ಯಕ್ಷತೆ ಇತ್ತು. ಆಂತರಿಕ ಭದ್ರತಾ ವಿಷಯಗಳು, ಸೈಬರ್​ ಕ್ರೈಂ, ಮಹಿಳೆಯರ ಸುರಕ್ಷತೆ, ಕರಾವಳಿ ಪ್ರದೇಶಗಳ ಭದ್ರತೆ ಮತ್ತಿತರ ವಿಷಯಗಳ ಮೇಲಿನ ಚರ್ಚೆ ಈ ಚಿಂತನಾ ಶಿಬಿರದ ಮೂಲ ಆಶಯ.

ಗುರುವಾರ ಪ್ರಾರಂಭಗೊಂಡ ಚಿಂತನಾ ಶಿಬಿರದಲ್ಲಿ ಹರ್ಯಾಣ ಗೃಹ ಸಚಿವ ಅನಿಲ್​ ವಿಜ್​ ಸ್ವಾಗತ ಭಾಷಣ ಪ್ರಾರಂಭಿಸಿದ್ದರು. ಶಿಬಿರದ ಅಧ್ಯಕ್ಷರು, ಆಗಮಿಸಿದ ಅತಿಥಿಗಳಿಗೆ ಅವರು ಸ್ವಾಗತ ಕೋರಬೇಕಿತ್ತು ಮತ್ತು ಅದಕ್ಕಾಗಿ ಅವರಿಗೆ ಐದು ನಿಮಿಷ ಮಾತ್ರ ಸಮಯಾವಕಾಶ ನೀಡಲಾಗಿತ್ತು. ಆದರೆ ಅನಿಲ್​ ವಿಜ್​ ಸ್ವಾಗತ ಭಾಷಣ ಮಾಡುವುದು ಬಿಟ್ಟು, ಹರ್ಯಾಣದ ಇತಿಹಾಸ, ಹಸಿರು ಕ್ರಾಂತಿಗೆ, ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ರಾಜ್ಯದ ಕೊಡುಗೆ, ಹರ್ಯಾಣದಲ್ಲಿ ಕ್ರೀಡಾಭಿವೃದ್ಧಿಗೆ ಕಲ್ಪಿಸಿಕೊಡಲಾದ ಮೂಲಸೌಕರ್ಯಗಳ ಬಗ್ಗೆಯೆಲ್ಲ ಮಾತನಾಡಲು ಶುರು ಮಾಡಿದರು. ಅಷ್ಟೇ ಅಲ್ಲ, ತಾವು ಪ್ರತಿವಾರ ನಡೆಸುವ ಕುಂದುಕೊರತೆ ಸಭೆಯ ಬಗ್ಗೆಯೂ ಉಲ್ಲೇಖಿಸಿ ನಾನ್​ಸ್ಟಾಪ್ ಭಾಷಣ ಮಾಡುತ್ತಲೇ ಹೋದರು.

ಅನಿಲ್​ ವಿಜ್​​ ಕುಳಿತ ಸೀಟ್​​ನಿಂದ ಏಳನೇ ಸೀಟ್​​ನಲ್ಲಿ ಕುಳಿತಿದ್ದ ಗೃಹ ಸಚಿವ ಅಮಿತ್​ ಶಾ, ವಿಜ್​ ಮಾತುಗಳನ್ನು ಆಲಿಸುತ್ತಿದ್ದವರು, ಕೆಲ ನಿಮಿಷಗಳ ಬಳಿಕ ಒಂದು ಚೀಟಿಯನ್ನು ಅನಿಲ್​ ವಿಜ್​​ಗೆ ಕಳಿಸಿದರು. ಸಮಯ ಮುಗಿಯಿತು, ಹೀಗಾಗಿ ಭಾಷಣ ನಿಲ್ಲಿಸಿ ಎಂದು ಅದರಲ್ಲಿ ಅವರು ಬರೆದಿದ್ದರು. ಆದರೆ ಅನಿಲ್​ ವಿಜ್​ ಸುಮ್ಮನಾಗಲಿಲ್ಲ. ಭಾಷಣ ಮುಂದುವರಿಸಿದರು. ಆಗ ಅಮಿತ್​ ಶಾ, ಅನಿಲ್​ ವಿಜ್​​ರನ್ನು ಕರೆದು, ತಮ್ಮ ಮೈಕ್​ ಮೇಲೆ ತಟ್ಟಿ ಮಾತು ನಿಲ್ಲಿಸುವಂತೆ ಸನ್ನೆ ಮಾಡಿದರು. ಆದರೆ ಅನಿಲ್​ ವಿಜ್​​ಗೆ ಈ ಸೂಕ್ಷ್ಮ ಕೂಡ ಅರ್ಥವಾಗಲಿಲ್ಲ. ಕೊನೆಗೆ ಅಮಿತ್​ ಶಾ ಅನಿವಾರ್ಯವಾಗಿ ಮಾತಿನ ಮೂಲಕವೇ ಹೇಳಿದರು. ‘ಅನಿಲ್​ ಜಿ, ನಿಮಗೆ ಭಾಷಣ ಮಾಡಲು ಅವಕಾಶ ಕೊಟ್ಟಿದ್ದು ಐದು ನಿಮಿಷ ಮಾತ್ರ. ಆದರೆ ನೀವು ಎಂಟೂವರೆ ನಿಮಿಷ ಮಾತನಾಡಿದಿರಿ. ದಯವಿಟ್ಟು ಮಾತು ನಿಲ್ಲಿಸಿ. ಸುದೀರ್ಘ ಭಾಷಣಕ್ಕೆ ಇದು ಸ್ಥಳವಲ್ಲ. ಚಿಕ್ಕದಾಗಿ ಭಾಷಣ ಮಾಡಬೇಕು’ ಎಂದು ನೇರವಾಗಿಯೇ ಹೇಳಿದರು.

ಅಷ್ಟಾದರೂ ಅನಿಲ್​ ವಿಜ್ ಇನ್ನು ಸ್ವಲ್ಪವೇ ಇದೆ ಎಂದು ಮಾತು ಮುಂದುವರಿಸಿದಾಗ ಅಮಿತ್​ ಶಾ, ‘ಮುಗಿಸಿ ಮುಗಿಸಿ ಸಾಕು. ಇಂಥ ವಿಷಯವನ್ನೆಲ್ಲ ಇಲ್ಲಿ ಹೇಳುತ್ತ ಕುಳಿತರೆ ಅದು ಮುಗಿಯುವುದಲ್ಲ. ನೀವೀಗ ಭಾಷಣ ನಿಲ್ಲಿಸಲೇಬೇಕು’ ಎಂದು ಕಠೋರವಾಗಿಯೇ ಹೇಳಿದ್ದಾರೆ. ಬಳಿಕ ಅನಿಲ್ ವಿಜ್ ಮುಜುಗರಗೊಂಡು,​ ಮಾತು ನಿಲ್ಲಿಸಿದ್ದಾರೆ. ಅವರ ನಂತರ ಭಾಷಣ ಮಾಡಬೇಕಿದ್ದ ಹರ್ಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ನಿಗದಿಯಾಗಿದ್ದ ಸಮಯಕ್ಕಿಂತಲೂ ಕಡಿಮೆ ಸಮಯದಲ್ಲಿ ಭಾಷಣ ಮಾಡಿದರು.

ಇದನ್ನೂ ಓದಿ: Amit Shah | ದೇಶದ ಪ್ರತಿ ರಾಜ್ಯದಲ್ಲೂ 2024ರ ವೇಳೆಗೆ ಎನ್‌ಐಎ ಕಚೇರಿ, ಅಮಿತ್‌ ಶಾ ಘೋಷಣೆ

Exit mobile version