ನವದೆಹಲಿ: ನ್ಯಾಯಾಧೀಶರ ನೇಮಕವನ್ನು ನಿರ್ವಹಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುವ ಮೂಲಕ ಕೇಂದ್ರ ಕಾನೂನು ಸಚಿವ ಲಕ್ಷಣ ರೇಖೆಯನ್ನು ಮೀರಿದ್ದಾರೆ ಎಂದು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ (Harish Salve) ಅವರು ಹೇಳಿದ್ದಾರೆ.
ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಸರ್ಕಾರ ಅನುಸರಿಸಿದ ಪ್ರಕ್ರಿಯೆಗಳ ಬಗ್ಗೆ ಇತ್ತೀಚಿನ ಸುಪ್ರೀಂ ಕೋರ್ಟ್‌ನ ವಿಚಾರಣಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಚಿವರು, ಕೊಲಿಜಿಯಂ ಮೂಲಕ ನ್ಯಾಯಾಧೀಶರ ನೇಮಕಾತಿಯ ಬಗ್ಗೆ ಇದೇ ರೀತಿಯ ತನಿಖೆ ನಡೆಸಬಹುದು ಎಂದು ಹೇಳಿದರು.
ನನ್ನ ಅಭಿಪ್ರಾಯದಲ್ಲಿ ಕಾನೂನು ಸಚಿವರು ಲಕ್ಷ್ಮಣ ರೇಖೆಯನ್ನು ಮೀರಿದ್ದಾರೆ. ಅಸಂವಿಧಾನಿಕ ಕಾನೂನನ್ನು ನೋಡಿದಾಗ ಸುಪ್ರೀಂ ಕೋರ್ಟ್ ತನ್ನ ಕೈ ಹಿಡಿಯಬೇಕು ಮತ್ತು ಆ ಕಾನೂನನ್ನು ತಿದ್ದುಪಡಿ ಮಾಡಲು ಸರ್ಕಾರದ ಔದಾರ್ಯವನ್ನು ಅವಲಂಬಿಸಿರಬೇಕು ಎಂದು ಅವರು ಭಾವಿಸಿಕೊಂಡರೆ ಅದು ಅವರ ತಪ್ಪು ಅನಿಸಿಕೆಯಾಗುತ್ತದೆ ಎಂದು ಸಾಳ್ವೆ ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಶೃಂಗದಲ್ಲಿ ಮಾತನಾಡಿದ ಸಾಳ್ವೆ ಅವರು, ಜಗತ್ತಿನಲ್ಲಿ ಯಾವುದೇ ನ್ಯಾಯಾಂಗವು ತನ್ನ ನೇಮಕವನ್ನು ತಾನೇ ಮಾಡಿಕೊಳ್ಳುವುದಿಲ್ಲ. ಇದು ಅಭೂತಪೂರ್ವವಾಗಿದೆ. ಆದರೆ, ಎನ್‌ಜೆಎಸಿ ನಿರ್ಧಾರವು ಆಳವಾಗಿ ದೋಷಪೂರಿತವಾಗಿದೆ. ಸಾಂಸ್ಥಿಕ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ರಾಜಕೀಯ ಕಾರ್ಯಾಂಗವು ಯಾವುದೇ ಹೇಳಿಕೆಯನ್ನು ಹೊಂದಿರಬಾರದು ಎಂಬ ಪ್ರತಿಪಾದನೆಯನ್ನು ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ | Judges Appointement | ಕಾನೂನು ಸಚಿವ ರಿಜಿಜು ಹೇಳಿಕೆಗೆ ಸುಪ್ರೀಂ ಗರಂ! ನೇಮಕಾತಿಗೆ ತಡವೇಕೆ?