ಇತ್ತೀಚಿನ ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಹೊಸಹೊಸ ಮುಖಗಳಿಗೆ ಟಿಕೆಟ್ ನೀಡುವ ಪರಿಪಾಠ ಬೆಳೆಸಿಕೊಂಡಿದೆ. ಹಾಲಿಯಾಗಿ ಇರುವ ಕೆಲವು ಶಾಸಕರಿಗೂ ಟಿಕೆಟ್ ನೀಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಸಮೀಪಿಸುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ. ಮೇ 10ಕ್ಕೆ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 20 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಅವರ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಈ ಹಿಂದೆ ಗುಜರಾತ್ ಚುನಾವಣೆ ಹೊತ್ತಲ್ಲೂ ಪಕ್ಷ ಇದೇ ಪ್ರಯೋಗ ಮಾಡಿತ್ತು ಮತ್ತು ಅದರಿಂದ ಅಲ್ಲಿ ಬಿಜೆಪಿ ಗೆಲುವಿಗೆ ಏನೂ ತೊಂದರೆಯೂ ಆಗಿಲ್ಲ.
ಹೀಗೆ ಹೊಸಬರಿಗೆ ಟಿಕೆಟ್ ನೀಡುವ ಬಿಜೆಪಿಯ ಕ್ರಮ ಪಕ್ಷದೊಳಗೆ ಅಸಮಾಧಾನ-ಬಂಡಾಯವನ್ನು ಹೆಚ್ಚಿಸುತ್ತಿರುವ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಶನಿವಾರ ಇಂಡಿಯಾ ಟುಡೆ ಮಾಧ್ಯಮದ ಕರ್ನಾಟಕ ರೌಂಡ್ಟೇಬಲ್ 2023ರಲ್ಲಿ ಮಾತನಾಡಿದ ಅಮಿತ್ ಶಾ ‘ಬಿಜೆಪಿ ಯಾವತ್ತೂ ಬದಲಾವಣೆಯಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿಯೇ ನಾವು ಚುನಾವಣೆಗಳಲ್ಲಿ ಹೊಸಬರಿಗೆ ಅವಕಾಶ ನೀಡುತ್ತೇವೆ’ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಸಲ ಟಿಕೆಟ್ ತಪ್ಪಿದವರಲ್ಲಿ ಪ್ರಮುಖವಾಗಿ ಬಂಡಾಯವೆದ್ದು ಕಾಂಗ್ರೆಸ್ ಸೇರಿದವರು ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ. ಅದರಲ್ಲೂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಜಾಸ್ತಿ ಎನ್ನುವಷ್ಟು ಹೈಡ್ರಾಮಾಕ್ಕೆ ಕಾರಣವಾಗಿದೆ. ಆ ಬಿಸಿ ಹಾಗೇ ಇರುವಾಗಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
‘ಬಿಜೆಪಿ ಪಕ್ಷ ಸುಖಾಸುಮ್ಮೆ ಟಿಕೆಟ್ ನೀಡುವುದಿಲ್ಲ. ಹಲವು ವಿಷಯಗಳನ್ನು ಪರಿಗಣಿಸಿ, ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹೊಸ ಪೀಳಿಗೆಯವರಿಗೆ ಅವಕಾಶ ಕೊಡಬೇಕು ಎಂಬುದನ್ನೂ ನಾವು ಪರಿಗಣಿಸುತ್ತೇವೆ. ಟಿಕೆಟ್ ನೀಡಿಲ್ಲ ಎಂದ ಮಾತ್ರಕ್ಕೆ ಅವರು ಕಳಂಕಿತರು, ಅಸಮರ್ಥರು ಎಂದು ಅರ್ಥವಲ್ಲ. ಅವರೂ ಕೂಡ ಗೌರವಾನ್ವಿತರೇ. ನಾವು ಟಿಕೆಟ್ ನೀಡದೆ ಇರುವ ಬಗ್ಗೆ ಮೊದಲೇ ಅವರೊಂದಿಗೆ ಚರ್ಚಿಸಿರುತ್ತೇವೆ’ ಎಂದೂ ಅಮಿತ್ ಶಾ ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ ‘ಶೆಟ್ಟರ್ ಕಾಂಗ್ರೆಸ್ ಸೇರಿದಾಕ್ಷಣ ನಾವು ಚುನಾವಣೆಯನ್ನೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಭಾವಿಸಿದರೆ ಅದು ತಪ್ಪು. ಶೆಟ್ಟರ್ ಮಾತ್ರ ಕಾಂಗ್ರೆಸ್ ಸೇರಿದ್ದಾರೆಯೇ ಹೊರತು, ನಮ್ಮ ಮತದಾರರಾಗಲೀ, ನಮ್ಮ ಪಕ್ಷದ ಕಾರ್ಯಕರ್ತರಾಗಲೀ ಕಾಂಗ್ರೆಸ್ಗೆ ಸೇರಿಲ್ಲ. ನಮ್ಮ ಪಕ್ಷ ಕರ್ನಾಟಕದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ’ ಎಂದೂ ಹೇಳಿದರು.