ನವದೆಹಲಿ: ಚಕ್ರವ್ಯೂಹ ರಚನೆಯಾಗುತ್ತಿದೆ. ಆದರೆ ಅದು ಕಾಂಗ್ರೆಸ್ ಹಗರಣಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿಯ ಚಕ್ರವ್ಯೂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಎಎನ್‌ಐ ಜತೆ ಮಾತನಾಡಿರುವ ಸಚಿವ ಪ್ರಲ್ಹಾದ್ ಜೋಶಿ, ಇದನ್ನು ಡ್ರಾಮಾಬಾಜಿ ಎಂದು ಕರೆದಿದ್ದಾರೆ. 60 ವರ್ಷಗಳ ಕಾಲ ಮಾಡಿರುವ ಭ್ರಷ್ಟಾಚಾರ ಮತ್ತು ಹಗರಣವನ್ನು ಮುಚ್ಚಿಹಾಕಲು ಇದೆಲ್ಲವನ್ನೂ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ
ರಾಹುಲ್ ಗಾಂಧಿ ಹಾಗೂ ಅವರ ತಾಯಿ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ಏಕೆ ನಡೆಸುತ್ತಿದ್ದರು? ಈಗ ಏಕೆ ನಾಟಕವಾಡುತ್ತಿದ್ದಾರೆ? ತಮ್ಮ ಸರ್ಕಾರದಲ್ಲಿ ಮಾಡಿದ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಇದು ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಏನು ಹೇಳಿದ್ದರು?
ಕಾಂಗ್ರೆಸ್ ನಾಯಕ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲೂ, ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದರು. “ಮಹಾಭಾರತದ ಚಕ್ರವ್ಯೂಹದಂತೆ ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದರು.
“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದ್ದರು.
“21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ ಹಾಗೂ ಅದು ಕಮಲದ ಆಕಾರದಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನರೇಂದ್ರ ಮೋದಿ ಅವರು ಎದೆಯ ಮೇಲೆ ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಅಭಿಮನ್ಯುವಿಗೆ ಏನಾಯಿತೋ, ಅದರಂತೆ ಭಾರತದ ಜನರನ್ನು ಆ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಿಗಳು ಈಗ ಆ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ” ಎಂದು ರಾಹುಲ್ ಗಾಂಧಿ ಕುಹಕವಾಡಿದ್ದರು.
ಚಕ್ರವ್ಯೂಹದಲ್ಲಿರುವ 6 ಜನ ಯಾರು?
“ಚಕ್ರವ್ಯೂಹದಲ್ಲಿ ತುಂಬ ಜನ ಇರುತ್ತಾರೆ. ಆದರೆ, ಚಕ್ರವ್ಯೂಹದ ಮಧ್ಯದಲ್ಲಿ 6 ಜನ ಇರುತ್ತಾರೆ ಹಾಗೂ ಅವರು ಇಡೀ ಚಕ್ರವ್ಯೂಹವನ್ನು ನಿಯಂತ್ರಿಸುತ್ತಾರೆ. ಆಧುನಿಕ ಕಾಲದ ಚಕ್ರವ್ಯೂಹವನ್ನು ಕೂಡ ಆರು ಜನ ನಿಯಂತ್ರಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿಯೇ ಈಗ ಕಮಲದ ಆಕಾರದ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇದನ್ನೂ ಓದಿ: Paris Olympics 2024 : ಜುಲೈ 31ರಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ ಇಂತಿದೆ