ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಮಾತುಗಾರ್ತಿ. ಸಂಸತ್ನಲ್ಲೇ ಇರಲಿ, ಮಾಧ್ಯಮದವರೊಂದಿಗೆ ಇರಲಿ, ಜನಸಾಮಾನ್ಯರೊಟ್ಟಿಗೇ ಆಗಲಿ, ಖಡಾಖಂಡಿತವಾಗಿ, ಖಡಕ್ ಆಗಿ, ಸ್ಫುಟವಾಗಿ ಮಾತನಾಡುತ್ತಾರೆ. ಇದೀಗ ಸ್ಮೃತಿ ಇರಾನಿಯವರು ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಠಿಯಲ್ಲಿ, ಪತ್ರಕರ್ತನೊಬ್ಬನಿಗೆ ಎಚ್ಚರಿಕೆ ನೀಡಿದ್ದಾರೆ. ‘ನನ್ನ ಕ್ಷೇತ್ರದ ಜನರಿಗೆ ಅವಮಾನ ಮಾಡಬೇಡಿ ನೀವು’ ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಸ್ಮೃತಿ ಇರಾನಿಯವರು ಎಡಗೈಯಲ್ಲಿ ಚಹಾ ತುಂಬಿದ ಮಣ್ಣಿನ ಲೋಟ ಹಿಡಿದಿದ್ದಾರೆ. ಕಾರು ಹತ್ತಲೆಂದು ಬಂದವರು ನಿಂತು, ವರದಿಗಾರನೊಬ್ಬನ ಬಳಿ ‘ನೀವು ನನ್ನ ಕ್ಷೇತ್ರವನ್ನು, ಕ್ಷೇತ್ರದ ಜನರನ್ನು ಅವಮಾನ ಮಾಡಬೇಡಿ’ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಆ ರಿಪೋರ್ಟರ್ ‘ಇಲ್ಲ, ನಾನು ಅವಮಾನ ಮಾಡಿಲ್ಲ, ಅವಮಾನ ಎಲ್ಲಿ ಮಾಡಿದೆ’ ಎಂದು ಪ್ರಶ್ನಿಸುತ್ತಾನೆ. ಆದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಆತನನ್ನು ಬಿಡುವುದೇ ಇಲ್ಲ. ಕಾರಿನ ಮುಂಭಾಗದ ಸೀಟ್ನಲ್ಲಿ ಕುಳಿತು ರಿಪೋರ್ಟರ್ಗೆ ಖಡಕ್ ಎಚ್ಚರಿಕೆ ಕೊಡುತ್ತಾರೆ. ಸುಮಾರು 1 ನಿಮಿಷ 19 ಸೆಕೆಂಡ್ಗಳ ಕಾಲ ಸ್ಮೃತಿ ಇರಾನಿ ಮತ್ತು ವರದಿಗಾರನ ನಡುವೆ ಸಂಭಾಷಣೆ ನಡೆಯುತ್ತದೆ.
ಇದನ್ನೂ ಓದಿ: Karnataka Election : ಬಿಜೆಪಿ ಪ್ರಣಾಳಿಕೆಯಲ್ಲಿ ಮಹಿಳೆಯರ ರಕ್ಷಣೆಗೆ ಭರವಸೆ ಎಂದ ಸ್ಮೃತಿ ಇರಾನಿ
ಸ್ಮೃತಿ ಇರಾನಿಯವರು ಬೈಯ್ಯುವಾಗ ದೈನಿಕ್ ಭಾಸ್ಕರ್ ಮಾಧ್ಯಮದ ಹೆಸರು ಹೇಳಿದ್ದಾರೆ. ಹೀಗಾಗಿ ಅವರು ಎಚ್ಚರಿಕೆ ನೀಡುತ್ತಿರುವುದು ದೈನಿಕ್ ಭಾಸ್ಕರ್ ಮಾಧ್ಯಮದ ವರದಿಗಾರನಿಗೇ ಎಂಬುದು ಗೊತ್ತಾಗುತ್ತದೆ. ‘ನೀವು ನನ್ನ ಕ್ಷೇತ್ರಕ್ಕೆ ಅಪಮಾನ ಮಾಡಿದರೆ, ನಾನು ನಿಮ್ಮ ಮಾಧ್ಯಮದ ಮಾಲೀಕರಿಗೆ ಕರೆ ಮಾಡಿ, ಮಾತಾಡಿ ದೂರು ನೀಡುತ್ತೇನೆ. ಯಾವುದೇ ವರದಿಗಾರನಿಗೂ ಒಂದು ಕ್ಷೇತ್ರವನ್ನು, ಅಲ್ಲಿನ ಜನರನ್ನು ಅವಮಾನ ಮಾಡುವ ಅಧಿಕಾರ, ಸ್ವಾತಂತ್ರ್ಯ ಇರುವುದಿಲ್ಲ. ಭಯ್ಯಾ, ನಾನು ತುಂಬ ಪ್ರೀತಿಯಿಂದ, ವಿಧೇಯತೆಯಿಂದ ಹೇಳುತ್ತಿದ್ದೇನೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ನನ್ನ ಕ್ಷೇತ್ರಕ್ಕೆ, ನನ್ನ ಕ್ಷೇತ್ರದ ಜನರಿಗೆ ಅವಮಾನ ಮಾಡಬೇಡಿ. ಹಾಗೊಮ್ಮೆ ಮಾಡಿದರೆ, ಇಲ್ಲಿನ ಮತದಾರರೇ ನಿಮಗೆ ತಕ್ಕ ಉತ್ತರ ಕೊಡುತ್ತಾರೆ’ ಎಂದು ಸ್ಮೃತಿ ಇರಾನಿ ಹೇಳುವುದು ವಿಡಿಯೊದಲ್ಲಿ ಕೇಳುತ್ತದೆ. ‘ಸೆಲೋನ್ ವಿಧಾನಸಭಾ ಕ್ಷೇತ್ರವೂ ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ನೀವು ಯಾವುದೇ ಕ್ಷೇತ್ರದ ಬಗ್ಗೆಯೂ ಮಾತಾಡಬೇಡಿ’ ಎಂದು ಸ್ಮೃತಿ ಇರಾನಿ ವರದಿಗಾರನಿಗೆ ಹೇಳುತ್ತಾರೆ.
ಸ್ಮೃತಿ ಇರಾನಿ ಅವರು ವರದಿಗಾರನಿಗೆ ಎಚ್ಚರಿಕೆ ಕೊಡುವ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಆದರೆ ರಿಪೋರ್ಟರ್ನ ಯಾವ ಪ್ರಶ್ನೆಗೆ ಸ್ಮೃತಿ ಇರಾನಿ ಇಷ್ಟು ಸಿಟ್ಟಾದರು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಕಾಂಗ್ರೆಸ್ ಪಕ್ಷ ವಿಡಿಯೊವನ್ನು ಶೇರ್ ಮಾಡಿಕೊಂಡು ವ್ಯಂಗ್ಯ ಮಾಡಿದೆ. ‘ಆ ಪತ್ರಕರ್ತ ಸಚಿವೆ ಸ್ಮೃತಿ ಇರಾನಿ ಬಳಿ, 13 ರೂಪಾಯಿಗೆ ಸಕ್ಕರೆ ಯಾವಾಗ ಸಿಗುತ್ತದೆ?, ಗ್ಯಾಸ್ ಸಿಲಿಂಡರ್ ಬೆಲೆ ಯಾವಾಗ ಕಡಿಮೆಯಾಗುತ್ತದೆ?, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಯಾಕೆ ಮೌನವಾಗಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿರಬಹುದು. ಅದಕ್ಕೆ ಉತ್ತರಿಸಲಾಗದ ಸಚಿವೆ ಹೀಗೆ ಬೆದರಿಕೆ ಹಾಕಿದ್ದಾರೆ. ಮಾಲೀಕರಿಗೆ ದೂರ ಕೊಟ್ಟು, ವರದಿಗಾರನ ಕೆಲಸ ತೆಗೆಸುವುದಾಗಿಯೂ ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಮಧ್ಯೆ ನೆಟ್ಟಿಗರು ಸಿಕ್ಕಾಪಟೆ ಕುತೂಹಲ ವ್ಯಕ್ತಪಡಿಸಿದ್ದಾರೆ. ವರದಿಗಾರ ಅಂಥ ಏನು ಪ್ರಶ್ನೆ ಕೇಳಿರಬಹುದು ಎಂದು ಒಂದಷ್ಟು ಜನ ಪ್ರಶ್ನಿಸಿದ್ದರೆ, ಇನ್ನೊಂದಷ್ಟು ಜನ ಸ್ಮೃತಿ ಇರಾನಿಯವರ ಗಟ್ಟಿತನವನ್ನು ಶ್ಲಾಘಿಸಿದ್ದಾರೆ. ಮತ್ತೊಂದಷ್ಟು ಮಂದಿ ಸ್ಮೃತಿ ಇರಾನಿಯವರನ್ನೇ ಟೀಕಿಸಿದ್ದಾರೆ. ಒಟ್ಟಾರೆ ಈ ವಿಡಿಯೊಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದೆಲ್ಲದರ ಮಧ್ಯೆ ದೈನಿಕ್ ಭಾಸ್ಕರ್ ಮಾಧ್ಯಮ ಸ್ಪಷ್ಟನೆ ಕೊಟ್ಟಿದೆ. ‘ಅಮೇಠಿಯಲ್ಲಿ ನಮ್ಮ ಮಾಧ್ಯಮದ ಅಧಿಕೃತ ವರದಿಗಾರನಿಲ್ಲ. ಬಿಡಿ ವರದಿಗಾರನನ್ನು ನೇಮಿಸಿದ್ದೇವೆ. ಆದರೆ ಸ್ಮೃತಿ ಇರಾನಿ ಜತೆ ಮಾತನಾಡಿದವನ ಹೆಸರು ವಿಪಿನ್ ಯಾದವ್ ಎಂದಾಗಿದೆ. ನಮ್ಮ ಬಿಡಿವರದಿಗಾರನ ಹೆಸರು ವಿಪಿನ್ ಅಲ್ವೇ ಅಲ್ಲ’ ಎಂದು ಮಾಧ್ಯಮ ತಿಳಿಸಿದೆ. ಹೀಗಾಗಿ ಅವನೊಬ್ಬ ನಕಲಿ ರಿಪೋರ್ಟರ್ ಎಂದು ಹೇಳಲಾಗುತ್ತಿದೆ.
ಸಚಿವೆ ಸ್ಮೃತಿ ಇರಾನಿಯವರು ವರದಿಗಾರನಿಗೆ ಬೈದ ವಿಡಿಯೊ ಇಲ್ಲಿದೆ
स्मृति ईरानी जी पत्रकार को धमका रही हैं। मालिक को फोन करके नौकरी खाने का विचार है।
— Congress (@INCIndia) June 9, 2023
लगता है पत्रकार ने पूछ लिया होगा- 13 रुपए में चीनी कब मिलेगी?
या गैस सिलेंडर के दाम कम कब होंगे?
या बेटियों के साथ हुए अत्याचार पर चुप क्यों हैं?
जवाब देते न बना तो धमकी पर उतर आईं।
स्मृति… pic.twitter.com/YsgijkJl4v