ಭೋಪಾಲ್: ಭಾರತದಲ್ಲಿ ಗುಂಡಿ ಬಿದ್ದ ರಸ್ತೆಗಳು ಎಲ್ಲ ಕಡೆ ಸಾಮಾನ್ಯವಾಗಿಬಿಟ್ಟಿವೆ. ಹಾಗೇ, ಮಧ್ಯಪ್ರದೇಶದ ಅನುಪ್ಪುರಂ ಎಂಬಲ್ಲಿಯೂ ರಸ್ತೆ ಮಧ್ಯೆ ದೊಡ್ಡದೊಡ್ಡ ಹೊಂಡಗಳು ಉಂಟಾಗಿ, ಅದರಲ್ಲೆಲ್ಲ ನೀರು ನಿಂತಿದೆ. ಇದರಿಂದಾಗಿ ಆ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಬಹುದೊಡ್ಡ ತೊಡಕಾಗಿದೆ. ಸ್ಥಳೀಯರು ಅದೆಷ್ಟೋ ಬಾರಿ ರಸ್ತೆ ರಿಪೇರಿ ಮಾಡಿಕೊಡುವಂತೆ ಬೇಡಿಕೆಯಿಟ್ಟು, ಅದು ಇನ್ನೂ ಈಡೇರದೆ ಇದ್ದಿದ್ದಕ್ಕೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ನೀರು ನಿಂತಿರುವ ಹೊಂಡದಲ್ಲಿಯೇ ಕುರ್ಚಿ-ಸ್ಟೂಲ್‌ಗಳನ್ನು ಇಟ್ಟು ಕುಳಿತುಕೊಂಡಿದ್ದಾರೆ. ಅಲ್ಲೇ ಕುಳಿತು ಏನೋ ಕುಡಿದಿದ್ದಾರೆ. ಅದನ್ನೊಂದು ಬೀಚ್ ಎಂದು ಪರಿಗಣಿಸಿಕೊಂಡು, ಕೂಲಿಂಗ್ ಗ್ಲಾಸ್‌ಗಳನ್ನೆಲ್ಲ ಹಾಕಿಕೊಂಡು ಡಾನ್ಸ್ ಮಾಡಿದ್ದಾರೆ. ಗೋವಾದ ಕಡಲತೀರದಲ್ಲೆಲ್ಲ ಜನರು ಮಸ್ತಿ ಮಾಡಿದಂತೆ, ನೀರು ನಿಂತ ಗುಂಡಿಯಲ್ಲಿ ಇವರೆಲ್ಲ ಮೋಜು ಮಾಡಿದ್ದಾರೆ. ಈ ಮೂಲಕ ರಸ್ತೆ ಗುಂಡಿಯನ್ನು ಮತ್ತು ದುರಸ್ತಿ ಮಾಡದ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಅಂದಹಾಗೇ, ಈ ಪ್ರಹಸನ ನಡೆದಿದ್ದು ಬಿಜುರಿ ಮುನ್ಸಿಪಲ್ಟಿಯ ಕಪಿಲಧಾರಾ ಕಾಲನಿಯಲ್ಲಿ. ಇಲ್ಲಿ ರಸ್ತೆ ಹಾಳಾದ ಬಗ್ಗೆ ಎಷ್ಟೋ ಸಲ ಸ್ಥಳೀಯ ಆಡಳಿತದ ಗಮನ ಸೆಳೆದು, ಕೊನೆಗೆ ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ಆದರೆ ಅದಾಗಿ ಹಲವು ತಿಂಗಳುಗಳೇ ಕಳೆದುಹೋದರೂ ಕೆಲಸ ಪ್ರಾರಂಭವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ತಮಗೆ ಆಗುತ್ತಿರುವ ತೊಂದರೆಯನ್ನೂ ಹೇಳಿಕೊಂಡಿದ್ದಾರೆ. ದೊಡ್ಡ ವಾಹನದವರು ಹೇಗಾದರೂ ಹೋಗುತ್ತಾರೆ. ಆದರೆ ಬೈಕ್ ಸವಾರರಿಗೆ ಭಾರಿ ಕಷ್ಟವಾಗುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ನೀರು ನಿಂತಿರುವಾಗಲಂತೂ ತುಂಬ ಪರದಾಡುವಂತಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರಜಾ ಮೂಡ್‌ನಲ್ಲಿ ಸೂರ್ಯ-ಜ್ಯೋತಿಕಾ ದಂಪತಿ: ವಿಡಿಯೊ ವೈರಲ್