ನವ ದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮ ಚಂದ್ರನಿಗೆ ಹೋಲಿಸಿ ಮಾತನಾಡಿರುವುದನ್ನು ಫೈರ್ ಬ್ರಾಂಡ್ ರಾಜಕಾರಣಿ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಭಗವಾನ್ ರಾಮಚಂದ್ರನಿಗೆ ಹೋಲಿಸುತ್ತಿದೆ. ಆದರೆ ಅಶಿಸ್ತಿನ ಲೈಫ್ ಸ್ಟೈಲ್ ನಡೆಸುತ್ತಿರುವ ವ್ಯಕ್ತಿಯನ್ನು ಅತ್ಯಂತ ಶ್ರೇಷ್ಠ ಶಿಸ್ತಿನ ಬದುಕನ್ನು ನಡೆಸಿದ ರಾಮನ ಜತೆಗೆ ಹೋಲಿಸಬಾರದು ಎಂದು ಸ್ವಾಮಿ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಬಿಳಿಯಾದ ಟಿ-ಶರ್ಟ್ ಮಾತ್ರ ಧರಿಸುತ್ತಾರೆ. ಅವರೊಬ್ಬ ಸೂಪರ್ ಹ್ಯೂಮನ್. ನಾವೆಲ್ಲ ದಿಲ್ಲಿಯ ಚಳಿಗೆ ನಡುಗುತ್ತಿದ್ದೇವೆ. ಚಳಿ ತಡೆಯಲು ಜಾಕೆಟ್ ಧರಿಸುತ್ತೇವೆ. ಆದರೆ ರಾಹುಲ್ ಗಾಂಧಿ ಕೇವಲ ಟೀ-ಶರ್ಟ್ ಧರಿಸಿ ಚುರುಕಾಗಿ ಓಡಾಡುತ್ತಿದ್ದಾರೆ. ಅವರೊಬ್ಬ ಅಸಾಧಾರಣ ಶಕ್ತಿ ಇರುವ ವ್ಯಕ್ತಿ. ಯೋಗಿಯಂತೆ ತಪೋ ಸದೃಶ ಬದುಕು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹಾಡಿ ಹೊಗಳಿದ್ದರು.
ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಳಿಕ ಸ್ಪಷ್ಟನೆ ನೀಡಿದ್ದ ಸಲ್ಮಾನ್ ಖುರ್ಷಿದ್, ಭಗವಂತನ ಜತೆಗೆ ಯಾರೊಬ್ಬರನ್ನೂ ಹೋಲಿಕೆ ಮಾಡಲಾಗದು ನಿಜ. ಆದರೆ ದೇವರ ಪಥದಲ್ಲಿ ನಡೆಯುವವರನ್ನು ನಾನು ಬೆಂಬಲಿಸುವೆ. ನಾವು ಒಳ್ಳೆಯ ವ್ಯಕ್ತಿಯಲ್ಲಿ ಮರ್ಯಾದಾ ಪುರುಷೋತ್ತಮನನ್ನು ಕಂಡರೆ, ಅಂಥವರನ್ನು ಹೊಗಳಬಾರದೇ? ಎಂದು ಸಮಜಾಯಿಷಿ ನೀಡಿದ್ದರು.
ಅದಕ್ಕೆ ತಿರುಗೇಟು ಕೊಟ್ಟಿದ್ದ ಸುಬ್ರಮಣ್ಯನ್ ಸ್ವಾಮಿ, ಏನಿದು ಮರ್ಯಾದಾ? ರಾಹುಲ್ ಗಾಂಧಿ ವಿರುದ್ಧ ಪ್ರಕರಣವೊಂದು ಗೃಹ ಸಚಿವಾಲಯದಲ್ಲಿ ಈಗಲೂ ಇದೆ. ಅದರ ಬಗ್ಗೆ ಅಮಿತ್ ಶಾ ಏಕೆ ಸುಮ್ಮನಿದ್ದಾರೆಯೋ ಗೊತ್ತಿಲ್ಲ. ಲಂಡನ್‌ನಲ್ಲಿ ಬ್ಯಾಕೋಪ್ಸ್ ಎಂಬ ಕಂಪನಿ ತೆರೆಯಲು ರಾಹುಲ್ ಗಾಂಧಿ ತಾವೊಬ್ಬ ಬ್ರಿಟಿಷ್ ನಾಗರಿಕ ಎಂದು ಹೇಳಿಕೊಂಡಿದ್ದರು. ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದಾಗ ರಾಹುಲ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ರಾಹುಲ್ ಗಾಂಧಿ ಅದಕ್ಕೆ ಉತ್ತರಿಸಿರಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದರು.
ಕಾಂಗ್ರೆಸ್‌ಗೆ ಹಿಂದೂ ಮತಗಳ ಕ್ರೋಢೀಕರಣದ ಭೀತಿ:
ಕಾಂಗ್ರೆಸ್‌ಗೆ ಹಿಂದುತ್ವ ಮತ ಬ್ಯಾಂಕ್ ಕ್ರೋಢೀಕರಣವಾಗುತ್ತಿರುವುದರ ಬಗ್ಗೆ ಭಯವಿದೆ. ಆದ್ದರಿಂದ ಅದನ್ನು ಒಡೆಯಲು ಹತಾಶೆಯಿಂದ ಯತ್ನಿಸುತ್ತಿದೆ. ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಕೆ ಮಾಡಿರುವುದು ಇದಕ್ಕೆ ನಿದರ್ಶನ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಹಿಂದೂಗಳ ಓಟುಗಳು ಈ ಹಿಂದೆ ಜಾತಿ ಲೆಕ್ಕಾಚಾರದಲ್ಲಿ ವಿಭಜನೆಯಾಗುತ್ತಿತ್ತು. ಆದರೆ ಇದೀಗ ಅಂಥ ವಿಭಜನೆ ಆಗುತ್ತಿಲ್ಲ. ಜನತೆ ಈಗ ತಮ್ಮನ್ನು ಹೆಚ್ಚಾಗಿ ಹಿಂದೂಗಳೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಜಾತಿ ವ್ಯವಸ್ಥೆ ಮುರಿದು ಬೀಳಲು ಆರಂಭವಾಗಿದೆ. ಹಿಂದೂಗಳ ಜನಸಂಖ್ಯೆ 80% ಆಗುತ್ತದೆ. ಅದು ಕಾಂಗ್ರೆಸ್ ಅನ್ನು ಭೀತಗೊಳಿಸಿದೆ ಎಂದು ಸ್ವಾಮಿ ಹೇಳಿದರು.
ಕಾಂಗ್ರೆಸ್ ಸದಾ ರಾಮನ ಅಸ್ತಿತ್ವವನ್ನು ಪ್ರಶ್ನಿಸಿತ್ತು:
ಕಾಂಗ್ರೆಸ್ ಈ ಹಿಂದೆ ಹಲವಾರು ಬಾರಿ ರಾಮನ ಅಸ್ತಿತ್ವವನ್ನು ಪ್ರಶ್ನಿಸಿತ್ತು. 2008ರಲ್ಲಿ ಸೇತು ಸಮುದ್ರಮ್ ಪ್ರಾಜೆಕ್ಟ್ ವಿರುದ್ಧ ನಾನು ಅರ್ಜಿ ಸಲ್ಲಿಸಿದ್ದೆ. ಆ ಯೋಜನೆಯಲ್ಲಿ ರಾಮ ಸೇತುವನ್ನು ಕತ್ತರಿಸಬೇಕಿತ್ತು. ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್ ಸಲ್ಲಿಸಿದ್ದ ಅಫಡವಿಟ್‌ನಲ್ಲಿ ರಾಮನ ಅಸ್ತಿತ್ವವನ್ನೇ ನಿರಾಕರಿಸಿತ್ತು. ರಾಮಾಯಣದ ಕಥೆ ಕಾಲ್ಪನಿಕ ಎಂದು ಪ್ರತಿಪಾದಿಸಿತ್ತು. ಬಳಿಕ ಅಫಿಡವಿಟ್ ಅನ್ನು ಪರಿಷ್ಕರಿಸಲಾಯಿತು. ಹೀಗಿದ್ದರೂ, ರಾಮನ ಅವತಾರ ಮತ್ತು ರಾಮ ಸೇತುವನ್ನು ಕಟ್ಟಲು ಸೂಚಿಸಿದ್ದ ಎಂಬುದನ್ನು ಅಫಡವಿಟ್‌ನಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿರಲಿಲ್ಲ ಎಂದು ಸ್ವಾಮಿ ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮಂದಿರ ವಿರೋಧಿಗಳಿಗೆ ಕಾಂಗ್ರೆಸ್ ವಕೀಲರುಗಳ ನೆರವನ್ನು ಒದಗಿಸಿತ್ತು ಎಂದು ಸುಬ್ರಮಣಿಯನ್ ಸ್ವಾಮಿ.