ಲಖನೌ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ (OBC Reservation In UP) ನೀಡಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ತಡೆಯಾಜ್ಞೆ ನೀಡಿದ ಬೆನ್ನಲ್ಲೇ, ಒಬಿಸಿಗೆ ಮೀಸಲಾತಿ ಕಲ್ಪಿಸಿಯೇ ಸಿದ್ಧ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಹಾಗೆಯೇ, ಮೀಸಲಾತಿ ಕಲ್ಪಿಸುವ ದಿಸೆಯಲ್ಲಿ ಅಧ್ಯಯನ ನಡೆಸಲು ಆಯೋಗ ರಚನೆಗೆ ಆದೇಶ ಹೊರಡಿಸಿದ್ದಾರೆ.
ಮೂರು ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, 545 ನಗರ ಪಂಚಾಯಿತಿಗಳ ಅಧ್ಯಕ್ಷರು, 200 ನಗರ ಪಾಲಿಕೆ ಸದಸ್ಯರು ಹಾಗೂ 17 ಮುನ್ಸಿಪಲ್ ಕಾರ್ಪೊರೇಷನ್‌ಗಳ ಮೇಯರ್‌ಗಳಿಗೆ ಯೋಗಿ ಸರ್ಕಾರ ಮೀಸಲಾತಿ ಘೋಷಿಸಿತ್ತು. ಆದರೆ, ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆ ಕುರಿತು ಅಧ್ಯಯನ ಮಾಡಲು ಆಯೋಗ ರಚಿಸದೆ ಮೀಸಲಾತಿ ಘೋಷಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಹಾಗಾಗಿ ಕೋರ್ಟ್, ಕರಡು ಅಧಿಸೂಚನೆ ರದ್ದುಪಡಿಸಿ, ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವಂತೆ ಆದೇಶಿಸಿದೆ.
ಯೋಗಿ ಆದಿತ್ಯನಾಥ್ ಹೇಳಿದ್ದೇನು?
“ರಾಜ್ಯದಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾತಿ ನೀಡದೆಯೇ ಚುನಾವಣೆ ನಡೆಸುವುದಿಲ್ಲ. ಸುಪ್ರೀಂ ಕೋರ್ಟ್‌ನ ತ್ರಿವಳಿ ಟೆಸ್ಟ್ ಅನ್ವಯವೇ ಆಯೋಗ ರಚಿಸಲಾಗುತ್ತದೆ. ಒಬಿಸಿ ಸಮುದಾಯದವರು ನಿಜವಾಗಿಯೂ ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂಬುದನ್ನು ತಿಳಿಯಲು ಅಧ್ಯಯನ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಸ್ಪರ್ಧಿಸಲು ಒಬಿಸಿ ಅಭ್ಯರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಿ ಡಿಸೆಂಬರ್ 5ರಂದು ಯೋಗಿ ಆದಿತ್ಯನಾಥ್ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ನ ತ್ರಿವಳಿ ಸೂತ್ರ ಪಾಲಿಸದೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ | OBC Reservation In UP | ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ರದ್ದು, ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಭಾರಿ ಹಿನ್ನಡೆ