ಲಕ್ನೋ: ಪ್ಯಾಲೆಸ್ತೀನ್ ಪರ (Save Palestine) ಬೆಂಬಲಿಸಿ ಪೋಸ್ಟ್ ಮಾಡಿದ್ದ ಉತ್ತರ ಪ್ರದೇಶದ ಕಾನ್‌ಸ್ಟೆಬಲ್ (UP Police Constable) ಒಬ್ಬರನ್ನು ಸೇವೆಯಿಂದ ಅಮಾನತು (Suspend from Service) ಮಾಡಿರುವ ಸರ್ಕಾರವು, ಇಲಾಖಾ ತನಿಖೆಗೆ ಆದೇಶಿಸಿದೆ. ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧ ನಡೆಯುತ್ತಿರುವ (Israel Palestine War) ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್‌ಸ್ಟೆಬಲ್, ಪ್ಯಾಲೆಸ್ತೀನ್ ಪರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಲ್ಲದೇ, ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆಂದು ಆರೋಪಿಸಲಾಗಿದೆ. ಈ ಪೋಸ್ಟ್ ಭಾರೀ ವೈರಲ್ ಆಗಿತ್ತು. ಬಳಿಕ ಅವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಸುಹೈಲ್ ಅನ್ಸಾರಿ ಅಮಾನತು ಆಗಿರುವ ಪೊಲೀಸ್ ಕಾನ್‌ಸ್ಟೆಬಲ್. ಬರೇಲಿ ನಿವಾಸಿಯಾಗಿರುವ ಅನ್ಸಾರಿ, ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಕೆಲವು ತಿಂಗಳಿಂದ ಡ್ಯೂಟಿಯಲ್ಲಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೇಣಿಯ ಅಧಿಕಾರಿಯು ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕಾನ್‌ಸ್ಟೆಬಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನಲ್ಲಿ ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಅವರ ಪೋಸ್ಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ಸಿಟಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ ಖೇರಿ ಡಿಎಸ್ಪಿ ಸಂದೀಪ್ ಸಿಂಗ್ ಅವರು ಹೇಳಿದ್ದಾರೆ.
ಪ್ಯಾಲೆಸ್ತೀನ್ ಉಳುವಿಗಾಗಿ ಹಣ ನೀಡುವಂತೆ ಅಸಮಾನತುಗೊಂಡಿರುವ ಪೊಲೀಸ್ ಕಾನ್‌ಸ್ಟೆಬಲ್ ಅವರು ಎಕ್ಸ್ ವೇದಿಕೆ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಕುರಿತು ಉತ್ತರ ಪ್ರದೇಶ ಪೊಲೀಸರಿಗೆ ದೂರುಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದ ಯಾವುದನ್ನಾದರೂ ಪೋಸ್ಟ್ ಮಾಡಿದ್ದಕ್ಕಾಗಿ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಈ ರೀತಿಯ ಮೊದಲ ಪ್ರಕರಣ ಇದಾಗಿದೆ.
ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಾವಿರಕ್ಕೂ ಅಧಿಕ ಇಸ್ರೇಲ್ ಜನರು ಮೃತಪಟ್ಟಿದ್ದರು. ಇದಾದ ಬಳಿಕ ಇಸ್ರೇಲ್, ಹಮಾಸ್ ಬಂಡುಕೋರರ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪರಿಪೂರ್ಣ ಯುದ್ಧ ಆರಂಭಿಸಿದ್ದರಿಂದ ಈವರೆಗೆ 4000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಯುದ್ಧ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದ ಇರಾನ್
ಐಸ್‌ಕ್ರೀಮ್ ಸಾಗಿಸುತ್ತಿದ್ದ ಟ್ರಕ್‌ಗಳು ಈಗ ಶವಾಗಾರಗಳು!
ಯುದ್ಧದ ರೀತಿ ಯಾವುದೇ ಆಗಿರಲಿ, ಯಾವುದೇ ಕಾರಣಕ್ಕೆ ಯುದ್ಧ ಸಂಭವಿಸಲಿ, ಅದರ ಸ್ವರೂಪ, ಪರಿಣಾಮ ಮಾತ್ರ ಮನುಕುಲದ ಮೇಲೆ ಒಂದೇ ಪರಿಣಾಮ ಬೀರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಇಸ್ರೇಲ್ ಹಾಗೂ ಹಮಾಸ್ ಉಗ್ರರ ಸಂಘರ್ಷದ (Israel Palestine War) ಪರಿಣಾಮವನ್ನು ಮುಗ್ಧ ನಾಗರಿಕರು, ಮಕ್ಕಳು, ಸ್ತ್ರೀಯರು ಎದುರಿಸುತ್ತಿದ್ದಾರೆ. ಮನೆ ಕಳೆದುಕೊಂಡು, ಸಂಬಂಧಿಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲೂ, ಇಸ್ರೇಲ್ ದಾಳಿಗೆ ಗಾಜಾ ನಗರವು ಅಕ್ಷರಶಃ ಮಸಣದಂತಾಗಿದೆ. ಐಸ್‌ಕ್ರೀಮ್ ಸಾಗಿಸುತ್ತಿದ್ದ ಟ್ರಕ್‌ಗಳಲ್ಲಿ (Ice Cream Trucks) ಶವಗಳನ್ನು ಇರಿಸುವ ಮೂಲಕ ಅವುಗಳನ್ನು ಶವಾಗಾರಗಳನ್ನಾಗಿ ಬಳಸಲಾಗುತ್ತಿದೆ. ಅಷ್ಟರಮಟ್ಟಿಗೆ ಇಸ್ರೇಲ್ ದಾಳಿಗೆ ಗಾಜಾ ನಗರದಲ್ಲಿ (Gaza City) ಅಮಾಯಕರ ಹೆಣಗಳು ಉರುಳಿವೆ.
ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ಮುಗಿಬಿದ್ದಿದೆ. ಇದರಿಂದಾಗಿ ಗಾಜಾದಲ್ಲಿ ಇದುವರೆಗೆ 2,600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗಳ ಶವಾಗಾರಗಳಲ್ಲಿ ಜನರ ಶವಗಳನ್ನು ಇರಿಸಲು ಕೂಡ ಜಾಗ ಇಲ್ಲದಂತಾಗಿದೆ. ಹಾಗಾಗಿ, ಗಾಜಾ ನಗರದಲ್ಲಿ ಐಸ್‌ಕ್ರೀಮ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನೇ ಶವಾಗಾರಗಳನ್ನಾಗಿ ಬಳಸಲಾಗುತ್ತಿದೆ. ಟ್ರಕ್‌ಗಳಲ್ಲಿ ಶವಗಳನ್ನು ಇರಿಸುವ ಮೂಲಕ ಅವುಗಳನ್ನೇ ಶವಾಗಾರಗಳ ರೀತಿ ಬಳಸಲಾಗುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಮಾಡಿದ ವರದಿಯ ವಿಡಿಯೊ ಈಗ ಭಾರಿ ವೈರಲ್ ಆಗಿದೆ.