Site icon Vistara News

ಪ್ರೇಯಸಿಗಾಗಿ ಲಿಂಗವನ್ನೇ ಬದಲಿಸುತ್ತಿರುವ ಉತ್ತರ ಪ್ರದೇಶದ ಮಹಿಳೆ

ಉತ್ತರ ಪ್ರದೇಶ: ಪ್ರಯಾಗ್‌ರಾಜ್‌ನ ಸಲಿಂಗಪ್ರೇಮಿ ಮಹಿಳೆಯರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಇದಕ್ಕೆ ಮನೆಯವರು ಸಮ್ಮತಿಸದ ಕಾರಣ ಇವರಲ್ಲಿ ಒಬ್ಬ ಮಹಿಳೆ ತನ್ನ ಲಿಂಗವನ್ನೇ ಬದಲಿಸಲು ಮುಂದಾಗಿದ್ದಾಳೆ.

ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಜೀವನದಲ್ಲಿ ಜೊತೆಯಾಗಿರುವ ಸಂಕಲ್ಪ ಮಾಡಿದ್ದರು. ಆದರೆ ಇವರ ಮನೆಯವರು ಸಮ್ಮತಿ ನೀಡಿರಲಿಲ್ಲ. ಹೀಗಾಗಿ ಇಬ್ಬರಲ್ಲಿ ಒಬ್ಬಳು ಮಹಿಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾಳೆ.

ಸಾಂಧರ್ಬಿಕ ಚಿತ್ರ

ಶಸ್ತ್ರಚಿಕಿತ್ಸೆಯ ಬಗ್ಗೆ ವೈದ್ಯರು ಹೇಳಿದ್ದೇನು?

ಮಹಿಳೆಯ ದೇಹದ ಮೇಲ್ಭಾಗ ಮತ್ತು ಎದೆಯ ಪುನರ್‌ರಚನೆಯ ಪರೀಕ್ಷೆ ಹಾಗೂ ಲೈಂಗಿಕ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಫಲಿತಾಂಶ ಪೂರ್ಣಗೊಳ್ಳಲು ಇನ್ನೂ 1.5 ವರ್ಷಗಳು ಬೇಕಾಗುತ್ತವೆ. ನಂತರವಷ್ಟೇ ಅವಳು ಪುರುಷನಾಗಲು ಸಾಧ್ಯ ಎಂದು ಚಿಕಿತ್ಸೆ ನೀಡಿರುವ, ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ವೈದ್ಯರ ತಂಡ ಹೇಳಿದೆ.

“ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಗರ್ಭಿಣಿಯಾಗುವ ಸ್ಥಿತಿಯಲ್ಲಿರುವುದಿಲ್ಲ. ಇಂತಹ ಕಾರ್ಯಾಚರಣೆಯನ್ನು ನಡೆಸಿರುವುದು ಇದೇ ಮೊದಲು ಮತ್ತು ಸುಮಾರು 18 ತಿಂಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮಹಿಳೆಯ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎಂದು ವೈದ್ಯ ಡಾ. ಮೋಹಿತ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್‌ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!

Exit mobile version